ನವದೆಹಲಿ, ಸೆ 14 (DaijiworldNews/MS): ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನಿ ಲಾಂಡರಿಂಗ್ ಪ್ರಕರಣದ ತನಿಖೆಯ ಭಾಗವಾಗಿ ₹ 47 ಕೋಟಿಗೂ ಹೆಚ್ಚು ಮೌಲ್ಯದ 431 ಕೆಜಿ ಚಿನ್ನ ಮತ್ತು ಬೆಳ್ಳಿಯನ್ನು ಜಾರಿ ನಿರ್ದೇಶನಾಲಯ ಇಂದು ವಶಪಡಿಸಿಕೊಂಡಿದೆ.
ಪರೇಖ್ ಅಲ್ಯುಮಿನೆಕ್ಸ್ ಲಿಮಿಟೆಡ್ ಎಂಬ ಕಂಪನಿಯ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಾ ಬುಲಿಯನ್ ಮತ್ತು ಕ್ಲಾಸಿಕ್ ಮಾರ್ಬಲ್ಸ್ ನ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ದಾಳಿಯ ಸಂದರ್ಭದಲ್ಲಿ ರಕ್ಷಾ ಬುಲಿಯನ್ ಕಂಪನಿಯ ಆವರಣದಲ್ಲಿ ಕೆಲವು ರಹಸ್ಯ ಖಾಸಗಿ ಲಾಕರ್ಗಳ ಕೀಗಳು ಪತ್ತೆಯಾಗಿದೆ. ಅಲ್ಲಿರುವ ಖಾಸಗಿ ಲಾಕರ್ಗಳನ್ನು ಪರಿಶೀಲಿಸಿದಾಗ, ಸರಿಯಾದ ಮಾನದಂಡಗಳನ್ನು ಅನುಸರಿಸದೆ ಲಾಕರ್ ಕಾರ್ಯಾಚರಣೆ ನಡೆಸುತ್ತಿರುವುದು ಕಂಡುಬಂದಿದೆ. "ಯಾವುದೇ ಕೆವೈಸಿ ಇಲ್ಲದಿರುವುದು ಹಾಗೂ ಆವರಣದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾ ಅಳವಡಿಸದಿರುವುದು ಹಾಗೂ ಇನ್ ಮತ್ತು ಔಟ್ ರಿಜಿಸ್ಟರ್ ಇಲ್ಲದಿರುವುದು ಕಂಡುಬಂದಿದೆ ," ಎಂದು ಇ.ಡಿ ಹೇಳಿದೆ.
ಆವರಣದಲ್ಲಿ 761 ಲಾಕರ್ಗಳಿದ್ದು, ಇದರಲ್ಲಿ ಮೂರು ರಕ್ಷಾ ಬುಲಿಯನ್ಗೆ ಸೇರಿದ್ದವು "ಲಾಕರ್ಗಳನ್ನು ತೆರೆದಾಗ ಎರಡು ಲಾಕರ್ಗಳಲ್ಲಿ 91.5 ಕೆಜಿ ಚಿನ್ನ (ಬಾರ್ಗಳು) ಮತ್ತು 152 ಕೆಜಿ ಬೆಳ್ಳಿ ಪತ್ತೆಯಾಗಿದ್ದು ಇದನ್ನು ವಶಪಡಿಸಿಕೊಳ್ಳಲಾಗಿದೆ."
ರಕ್ಷಾ ಬುಲಿಯನ್ ಸ್ಥಳದಿಂದ ಹೆಚ್ಚುವರಿ 188 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ್ ವಶಪಡಿಸಿಕೊಂಡ ಚಿನ್ನ ಮತ್ತು ಬೆಳ್ಳಿಯ ಒಟ್ಟು ಮೌಲ್ಯ ₹ 47.76 ಕೋಟಿ ರೂಪಾಯಿ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಪರೇಖ್ ಅಲ್ಯುಮಿನೆಕ್ಸ್ ಲಿಮಿಟೆಡ್ ವಿರುದ್ಧದ ಮನಿ ಲಾಂಡರಿಂಗ್ ಪ್ರಕರಣವು ಮಾರ್ಚ್ 2018ರದ್ದಾಗಿದೆ. ಈ ಅವಧಿಯಲ್ಲಿ ಕಂಪನಿಯು ಬ್ಯಾಂಕ್ಗಳಿಗೆ ವಂಚನೆ ಎಸಗಿದ್ದು, 2,296.58 ಕೋಟಿ ರೂ. ಸಾಲವನ್ನು ಪಡೆದುಕೊಂಡಿದೆ ಎಂದು ಆರೋಪಿಸಲಾಗಿದೆ.
ಈ ಹಣವನ್ನು, ನಂತರ ವಿವಿಧ ಕಂಪನಿಗಳಿಗೆ ವರ್ಗಾವಣೆ ಮಾಡುವ ಮೂಲಕ ಸೋರಿಕೆ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.