ನವದೆಹಲಿ, ಸೆ 14 (DaijiworldNews/DB): ಪಂಜಾಬ್ನ ಆಮ್ ಆದ್ಮಿ ಪಕ್ಷದ 10 ಮಂದಿ ಶಾಸಕರನ್ನು ಖರೀದಿಸಲು ಬಿಜೆಪಿ ತಲಾ 25 ಕೋಟಿ ರೂ. ಹಣದ ಆಮಿಷವೊಡ್ಡಿದೆ ಎಂದು ದೆಹಲಿ ಮುಖ್ಯಮಂತ್ರಿ, ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಈ ಕುರಿತು ಬುಧವಾರ ಮಾತನಾಡಿದ ಕೇಜ್ರೀವಾಲ್, ಈ ವಿಚಾರ ನಿನ್ನೆಯಷ್ಟೇ ನನ್ನ ಗಮನಕ್ಕೆ ಬಂದಿತ್ತು. ದೆಹಲಿಯಲ್ಲಿ ಇದೇ ರೀತಿಯ ಯತ್ನ ನಡೆಸಿದ್ದರು. ಈಗ ಪಂಜಾಬ್ನಲ್ಲೂ ಅದೇ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಇಂದು ಪಕ್ಷದ ಶಾಸಕರು ಸುದ್ದಿಗೋಷ್ಠಿ ನಡೆಸಿ ಈ ಕುರಿತು ತಿಳಿಸಲಿದ್ದಾರೆ ಎಂದರು.
ಬಿಜೆಪಿಯವರು ಶಾಸಕರನ್ನು ಖರೀದಿಸಿ ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸುವ ಪ್ರಯತ್ನದಲ್ಲಿ ತೊಡಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಮಾರಕವಾಗಿದೆ. ಸಾರ್ವಜನಿಕರ ಹಣವನ್ನು ಶಾಸಕರ ಖರೀದಿಗಾಗಿ ಪೋಲು ಮಾಡುತ್ತಿದ್ದಾರೆ. ಇದರಿಂದಲೇ ದೇಶದಲ್ಲಿ ಹಣದುಬ್ಬರ ಜಾಸ್ತಿಯಾಗುತ್ತಿದೆ ಎಂದವರು ಆರೋಪಿಸಿದರು.
ಗೋವಾದಲ್ಲಿ ಈಗಾಗಲೇ ಕಾಂಗ್ರೆಸ್ನ ಐದು ಶಾಸಕರನ್ನು ಬಿಜೆಪಿ ತನ್ನೆಡೆಗೆ ಸೆಳೆದುಕೊಂಡಿದೆ. ಆದರೆ ಶಾಸಕರು ತಮ್ಮ ಪಕ್ಷದಲ್ಲೇ ಉಳಿಯುವಂತೆ ಮಾಡಲು ಮತ್ತು ಪಕ್ಷಾಂತರ ತಡೆಯಲು ಕಾಂಗ್ರೆಸ್ ವಿಫಲವಾಗಿದೆ ಎಂದು ಟೀಕೆ ವ್ಯಕ್ತಪಡಿಸಿದರು.