ಸೂರತ್, ಸೆ 14 (DaijiworldNews/DB): ಹಿಂದಿ ದೇಶದ ಎಲ್ಲಾ ಭಾಷೆಗಳ ಮಿತ್ರ ಭಾಷೆಯೇ ಹೊರತು ಯಾವುದೇ ಭಾಷೆಯ ಪ್ರತಿಸ್ಪರ್ಧಿಯಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸೂರತ್ನ ಅಖಿಲ ಭಾರತ ಅಧಿಕೃತ ಭಾಷೆಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಭಾಷೆಗಳ ಮೇಲೆ ಯಾರೂ ಹಿಂದಿಯನ್ನು ಹೇರಿಕೆ ಮಾಡುತ್ತಿಲ್ಲ. ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ ಎಂದರು.
ಹಿಂದಿ ಮತ್ತು ಗುಜರಾತಿ, ಹಿಂದಿ ಮತ್ತು ತಮಿಳು, ಹಿಂದಿ ಮತ್ತು ಮರಾಠಿ ಪರಸ್ಪರ ಪ್ರತಿಸ್ಪರ್ಧಿಗಳೆಂಬುದಾಗಿ ಕೆಲವರು ಅನಗತ್ಯವಾಗಿ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ದೇಶದ ಯಾವುದೇ ಭಾಷೆಗೆ ಹಿಂದಿ ಪ್ರತಿಸ್ಪರ್ಧಿ ಭಾಷೆಯಲ್ಲ. ಎಲ್ಲಾ ಭಾಷೆಗಳ ಮಿತ್ರ ಭಾಷೆ ಹಿಂದಿ ಎಂಬುದನ್ನು ದೇಶದ ಪ್ರತಿಯೊಬ್ಬರೂ ಅಗತ್ಯವಾಗಿ ತಿಳಿದುಕೊಳ್ಳಬೇಕು ಎಂದವರು ತಿಳಿಸಿದರು.
ಭಾಷೆಗಳಲ್ಲಿ ಸಹಬಾಳ್ವೆಯನ್ನು ಎಲ್ಲಿವರೆಗೆ ನಾವು ಒಪ್ಪಲು ಬಯಸುವುದಿಲ್ಲವೋ, ಅಲ್ಲಿಯವರೆಗೂ ಭಾಷೆಯಲ್ಲಿ ದೇಶ ನಡೆಸುವ ಕನಸು ಈಡೇರುವುದು ಅಸಾಧ್ಯ. ಮಾತೃಭಾಷೆ ಸಹಿತ ಎಲ್ಲಾ ಭಾಷೆಗಳಲ್ಲಿರುವ ಸೊಗಡು, ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಆ ಭಾಷೆಗಳನ್ನು ಸಮೃದ್ದವಾಗಿಡಲು ನಾವು ಮುಂದಾಗಬೇಕು ಎಂದವರು ಅಭಿಪ್ರಾಯಪಟ್ಟರು.