ಶ್ರೀನಗರ, ಸೆ 14 (DaijiworldNews/DB): ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಬಸ್ಸೊಂದು ಕಮರಿಗೆ ಉರುಳಿ ಬಿದ್ದ ಪರಿಣಾಮ 11 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಇಂದು ನಡೆದಿದೆ. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸೌಜಿಯಾನ್ನಿಂದ ಮಂಡಿಗೆ ತೆರಳುತ್ತಿದ್ದ ಬಸ್ ಪೂಂಚ್ ಜಿಲ್ಲೆಯ ಬರೇರಿ ನಾಲಾ ಬಳಿ ಪ್ರಯಾಣಿಸುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಆಳವಾದ ಕಮರಿಗೆ ಉರುಳಿ ಬಿದ್ದಿದೆ. ಬಸ್ನಲ್ಲಿದ್ದ 11 ಜನರು ಸಾವಿಗೀಡಾಗಿದ್ದು, ಗಾಯಾಳುಗಳನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಮಾಹಿತಿ ತಿಳಿದ ತತ್ಕ್ಷಣ ಧಾವಿಸಿದ ಪೊಲೀಸರು ಮತ್ತು ಸೇನೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಸ್ನ ಗಾಜುಗಳು ಪುಡಿಪುಡಿಯಾಗಿವೆ.
ಘಟನೆಯ ಬಗ್ಗೆ ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ಪರಿಹಾರ ಘೋಷಿಸಿದ್ದಾರೆ.