ಮಧ್ಯಪ್ರದೇಶ, ಸೆ 14 (DaijiworldNews/DB): ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಜೆಸಿಬಿಯಲ್ಲೇ ಆಸ್ಪತ್ರೆಗೆ ಕರೆದೊಯ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಬಾರ್ಹಿಯಲ್ಲಿ ಬೈಕ್ ಅಪಘಾತದಿಂದ ಗಾಯಗೊಂಡಿದ್ದ ವ್ಯಕ್ತಿ ಕೂಡಲೇ ಆಂಬುಲೆನ್ಸ್ಗೆ ಕರೆ ಮಾಡಿದ್ದಾನೆ. ಆತನ ಪಾದದಿಂದ ವಿಪರೀತ ರಕ್ತಸೋರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕೂಡಲೇ ಆಸ್ಪತ್ರೆಗೆ ಧಾವಿಸಬೇಕಿತ್ತು. ಆದರೆ ಆಂಬುಲೆನ್ಸ್ ತಡವಾಗಿ ಬಂದ ಹಿನ್ನೆಲೆಯಲ್ಲಿ ಆತನನ್ನು ಸ್ಥಳೀಯರಿಬ್ಬರು ಜೆಸಿಬಿಯಲ್ಲೇ ಆಸ್ಪತ್ರೆಗೆ ಕರೆದೊಯ್ದರು.
ಇನ್ನು ಘಟನೆ ಸಂಬಂಧ ಪ್ರತಿಕ್ರಿಯಿಸಿದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಪ್ರದೀಪ್ ಮುಧಿಯಾ ಅವರು, ಬೈಕ್ ಅಪಘಾತದಿಂದ ಗಾಯಗೊಂಡಿದ್ದ ವ್ಯಕ್ತಿ 108ಕ್ಕೆ ಕರೆ ಮಾಡಿದ್ದಾರೆ. ಆದರೆ ಆಂಬುಲೆನ್ಸ್ ಸೇವೆ ಒದಗಿಸುವ ಏಜೆನ್ಸಿಯಲ್ಲಿ ಬದಲಾವಣೆಯಾಗಿರುವುದರಿಂದ ಆಂಬುಲೆನ್ಸ್ ತಕ್ಷಣಕ್ಕೆ ಲಭ್ಯವಾಗಲಿಲ್ಲ. ತಡವಾಗಿ ಆಂಬುಲೆನ್ಸ್ ಆಗಮಿಸಿದೆ. ಹೊಸ ಆಂಬುಲೆನ್ಸ್ಗಳಿಗಾಗಿ ಈಗಾಗಲೇ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.