ಅಹಮದಾಬಾದ್ (ಗುಜರಾತ್), ಸೆ 14 (DaijiworldNews/DB): ಜಂಟಿ ಕಾರ್ಯಾಚರಣೆಯೊಂದರಲ್ಲಿ ಗುಜರಾತ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ಮೀನುಗಾರಿಕಾ ದೋಣಿಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಹಾಗೂ ಭಾರತೀಯ ಕೋಸ್ಟ್ ಗಾರ್ಡ್ ಇಂದು ಬೆಳಗ್ಗೆ ವಶ ಪಡಿಸಿಕೊಂಡಿವೆ.
ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ದೋಣಿಯನ್ನು ಜಂಟಿ ಕಾರ್ಯಾಚರಣೆಯಡಿ ತಡೆಯಲಾಯಿತು. ಬಳಿಕ ಅದನ್ನು ವಶಕ್ಕೆ ಪಡೆಯಲಾಯಿತು. ದೋಣಿಯಲ್ಲಿ 200 ಕೋಟಿ ರೂ.ಗೂ ಅಧಿಕ ಮೌಲ್ಯದ 40 ಕೆಜಿ ಹೆರಾಯಿನ್ ಪತ್ತೆಯಾಗಿದೆ. ದೋಣಿಯಲ್ಲಿದ್ದ ಆರು ಮಂದಿ ಪಾಕಿಸ್ತಾನಿಯರನ್ನು ಬಂಧಿಸಲಾಗಿದೆ ಎಂದು ಹಿರಿಯ ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಮಾದಕ ವಸ್ತು ಕಳ್ಳಸಾಗಾಣೆ ಪ್ರಕರಣಗಳನ್ನು ಈ ಹಿಂದೆಯೂ ಗುಜರಾತ್ ಎಟಿಎಸ್ ಮತ್ತು ಕೋಸ್ಟ್ ಗಾರ್ಡ್ ಸಿಬಂದಿ ತಡೆದಿದ್ದರು. ಗುಜರಾತ್ ಕರಾವಳಿ ಮೂಲಕ ಭಾರತಕ್ಕೆ ಡ್ರಗ್ಸ್ ಕಳ್ಳಸಾಗಾಣೆ ಮಾಡುತ್ತಿದ್ದ ವಿದೇಶಿ ಪ್ರಜೆಗಳನ್ನು ಕೂಡಾ ಈ ಸಂಬಂಧ ಬಂಧಿಸಿದ್ದರು.