ಬೆಂಗಳೂರು, ಸೆ 14 (DaijiworldNews/DB): ಭಾರತ್ ಜೋಡೋ ಯಾತ್ರೆಯ ಸಭೆಯಲ್ಲಿ ಭಾಗವಹಿಸಲು ನನ್ನನ್ನು ಆಹ್ವಾನಿಸಿಲ್ಲ, ನಾನ್ಯಾಕೆ ಹೋಗಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲಿಗರ ಮಧ್ಯೆ ಮತ್ತೆ ಅಸಮಾಧಾನಗಳು ಸೃಷ್ಟಿಯಾಗಿವೆ. ಯಾತ್ರೆಯ ಉಸ್ತುವಾರಿಯನ್ನು ಡಿ.ಕೆ. ಶಿವಕುಮಾರ್ ಅವರೇ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ ಸಿದ್ದತಾ ಸಭೆಗಳಿಗಾಗಲೀ, ಯಾತ್ರೆಯಲ್ಲಿ ಭಾಗವಹಿಸುವುದಕ್ಕಾಗಲೀ ಸಿದ್ದರಾಮಯ್ಯ ಅವರಿಗೆ ಯಾವುದೇ ಆಹ್ವಾನ ಇರಲಿಲ್ಲ.
ಬೆಂಗಳೂರಿನಲ್ಲಿ ನಿನ್ನೆ (ಸೆ.13) ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಹಾಗೂ ಭಾರತ್ ಜೋಡೋ ಯಾತ್ರೆಯ ಸಭೆ ಎದುರು ಬದುರು ಹಾಲ್ನಲ್ಲೇ ನಡೆದಿತ್ತು. ಶಾಸಕಾಂಗ ಸಭೆಗೆ ಆಗಮಿಸಿದ ಸಿದ್ದರಾಮಯ್ಯರನ್ನು ಭಾರತ್ ಜೋಡೋ ಸಭೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ನಾಯಕರಾದ ಅಜಯ್ ಸಿಂಗ್ ಹಾಗೂ ಸಲೀಂ ಅಹಮದ್ ಆಹ್ವಾನಿಸಿದರು. ಆದರೆ ಈ ಆಹ್ವಾನವನ್ನು ತಿರಸ್ಕರಿಸಿದ ಸಿದ್ದರಾಮಯ್ಯ ಅವರು, ನನಗೆ ಸಭೆಯಲ್ಲಿ ಭಾಗವಹಿಸುವಂತೆ ಯಾವುದೇ ಆಹ್ವಾನ ನೀಡಿಲ್ಲ. ಮತ್ಯಾಕೆ ನಾನು ಹೋಗಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರ ಭಾವಚಿತ್ರವನ್ನೂ ಹಾಕದಿರುವುದಕ್ಕೆ ಸಿದ್ದರಾಮಯ್ಯ ಬಣ ಅಸಮಾಧಾನಗೊಂಡಿದೆ ಎನ್ನಲಾಗಿದೆ.