ಮುಂಬೈ, ಸೆ 14 (DaijiworldNews/DB): ನಾಲ್ವರು ಸಾಧುಗಳನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಲವಣ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಉತ್ತರ ಪ್ರದೇಶದ ನಾಲ್ವರು ಸಾಧುಗಳು ಕರ್ನಾಟಕದ ಬಿಜಾಪುರದಿಂದ ಪಂಢರಪುರಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಕಿರಾಣಿ ಅಂಗಡಿಯೊಂದರ ಹೊರ ಭಾಗದಲ್ಲಿ ಸಾಧುಗಳು ಯಾವುದೋ ಪ್ರದೇಶಕ್ಕೆ ತೆರಳಲು ಬಾಲಕನೊಬ್ಬನ ಬಳಿ ದಾರಿ ಕೇಳಿದ್ದಾರೆ. ಈ ವೇಳೆ ಜನರ ಗುಂಪೊಂದು ಸಾಧುಗಳನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಕೋಲು ಹಿಡಿದುಕೊಂಡು ಬಂದು ಥಳಿಸಿದ್ದಾರೆ.
ಈ ಬಗ್ಗೆ ಸಾಧುಗಳು ಯಾವುದೇ ದೂರು ನೀಡಿಲ್ಲ. ಥಳಿಸುತ್ತಿರುವ ವೀಡಿಯೋ ವೈರಲ್ ಆಗಿದ್ದು, ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಾಂಗ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಗೆಡಮ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಸಾಧುಗಳು ಉತ್ತರ ಪ್ರದೇಶದ 'ಅಖಾಡಾ'ದ ಸದಸ್ಯರು ಎಂಬುದಾಗಿ ಗೊತ್ತಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.