ಅಹ್ಮದ್ನಗರ, ಸೆ 14 (DaijiworldNews/DB): ಅನ್ಯ ಧರ್ಮದ ಯುವತಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಯುವಕನೋರ್ವನನ್ನು ಕೊಲೆ ಮಾಡಿ ಮೃತದೇಹವನ್ನು ನದಿಗೆ ಎಸೆದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ದೀಪಕ್ ಬರ್ಡೆ (31) ಕೊಲೆಯಾದ ಯುವಕ. 19 ವರ್ಷ ವಯಸ್ಸಿನ ಅನ್ಯ ಧರ್ಮದ ಯುವತಿ ಜೊತೆಗೆ ದೀಪಕ್ ಬರ್ಡೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದರಿಂದ ಯುವತಿ ಕುಟುಂಬದವರು ಆಕ್ರೋಶಿತಗೊಂಡು ಯುವಕನನ್ನು ಹತ್ಯೆ ಮಾಡಿದ್ದಾರೆ. ಬಳಿಕ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದು, ಯುವತಿಯ ತಂದೆ, ಸಹೋದರ ಸೇರಿದಂತೆ ಎಲ್ಲಾ ಇತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನದಿಗೆ ಎಸೆದಿರುವ ಮೃತದೇಹಕ್ಕಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಸದ್ಯ ಮೃತದೇಹದ ಹುಡುಕಾಟಕ್ಕಾಗಿ ಆರು ದೋಣಿಗಳನ್ನು ಬಳಸಿಕೊಳ್ಳಲಾಗಿದೆ.
ಮಗ ನಾಪತ್ತೆಯಾಗಿರುವ ಬಗ್ಗೆ ದೀಪಕ್ ಬರ್ಡೆಯ ತಂದೆ ರಾವ್ ಸಾಹೇಬ್ ದಾದಾ ಬರ್ಡೆ ಆಗಸ್ಟ್ 31ರಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಯುವಕನನ್ನು ಮೊಂಡು ಸಾಧನದಿಂದ ಹೊಡೆದು ಕೊಲೆ ಮಾಡಿರುವುದಾಗಿ ಮತ್ತು ಮೃತದೇಹವನ್ನು ನದಿಗೆ ಎಸೆದಿರುವುದಾಗಿ ಯುವತಿಯ ತಂದೆ ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮನೋಜ್ ಪಾಟೀಲ್ ತಿಳಿಸಿರುವುದಾಗಿ ವರದಿಯಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 342 (ಅಕ್ರಮ ಬಂಧನ), 363 (ಅಪಹರಣ), 34 (ಹಲವು ಮಂದಿ ಸೇರಿ ಮಾಡಿದ ಅಪರಾಧ) ಅನ್ವಯ ಪ್ರಕರಣ ದಾಖಲಿಸಲಾಗಿದೆ.