ಭೋಪಾಲ್, ಸೆ 14 (DaijiworldNews/DB): ನರ್ಸರಿಯಲ್ಲಿ ಕಲಿಯುತ್ತಿರುವ ಮೂರೂವರೆ ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಭೋಪಾಲ್ನ ಖಾಸಗಿ ಶಾಲೆಯ ಬಸ್ ಚಾಲಕನ ಮನೆಯನ್ನು ಅಧಿಕಾರಿಗಳು ಮಂಗಳವಾರ ನೆಲಸಮ ಮಾಡಿದ್ದಾರೆ.
ಭೋಪಾಲ್ನ ಶಾಹಪುರ ಪ್ರದೇಶದಲ್ಲಿರುವ ಆರೋಪಿಯ ಮನೆಯನ್ನು ಪೊಲೀಸರ ಮೇಲ್ವಿಚಾರಣೆಯಲ್ಲಿ ಕೆಡವಲಾಯಿತು. ಮನೆ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಮನೆಯನ್ನು ನೆಲಸಮಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಭೋಪಾಲ್ನ ಖಾಸಗಿ ಶಾಲೆಯೊಂದರ ನರ್ಸರಿ ವಿದ್ಯಾರ್ಥಿನಿಯಾಗಿರುವ ಮೂರೂವರೆ ವರ್ಷದ ಬಾಲಕಿ ಕಳೆದ ಗುರುವಾರ ಶಾಲೆ ಬಿಟ್ಟು ಮನೆಗೆ ತೆರಳುವ ವೇಳೆ ಬಸ್ ಚಾಲಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಮಗುವಿನ ಬ್ಯಾಗ್ನಲ್ಲಿಟ್ಟಿದ್ದ ಸ್ಟೇರ್ ಸೆಟ್ನಿಂದ ಮಗುವಿನ ಬಟ್ಟೆಯನ್ನು ಯಾರೋ ಬದಲಾಯಿಸಿರುವ ಬಗ್ಗೆ ಆಕೆಯ ತಾಯಿ ಗಮನಿಸಿ ವಿಚಾರಿಸಿದಾಗ ಬಾಲಕಿಯ ವಿಷಯ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಘಟನೆ ನಡೆದ ವೇಳೆ ಬಸ್ನಲ್ಲಿದ್ದ ಮಹಿಳಾ ಅಟೆಂಡರ್ ಸಹಿತ ಆರೋಪಿ ಚಾಲಕನನ್ನು ಬಂಧಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376-ಎಬಿ (12 ವರ್ಷದೊಳಗಿನ ಬಾಲಕಿಯ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.