ಬೆಂಗಳೂರು, ಸೆ 13 (DaijiworldNews/SM): ಕಳೆದ ಕೆಲವು ದಿನಗಳೊಂದ ರಾಜ್ಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಜನತೆ ಕಷ್ಟ ನಷ್ಟಗಳನ್ನು ಅನುಭವಿಸಿದ್ದು, ಜನರ ನೆರವಿಗೆ ಸಕಾಲದಲ್ಲಿ ಧಾವಿಸದ ಕಾರಣದಿಂದ ಸಂಕಷ್ಟ ಎದುರಾಗಿದೆ ಎಂದು ಮಾಜಿ ಸಿಎಂ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
"ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಜನರು ಕಷ್ಟ ನಷ್ಟಕ್ಕೆ ಈಡಾಗಿದ್ದಾರೆ. ಪ್ರವಾಹ ಪರಿಸ್ಥಿತಿ ಎದುರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳದ ಸರ್ಕಾರದ ಬೇಜವಾಬ್ದಾರಿ ಇಷ್ಟಕ್ಕೆಲ್ಲ ಕಾರಣ. ಈ ಹಿಂದೆ ಪ್ರವಾಹ ಬಂದಾಗಲೂ ನಾನು ಸರ್ಕಾರಕ್ಕೆ ಅನೇಕ ಸಲಹೆ ಸೂಚನೆಗಳನ್ನು ನೀಡಿದ್ದೆ, ಅದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದರೆ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ" ಎಂದರು.
'ಹವಾಮಾನ ತಜ್ಞರು ಮುಂದಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ರಾಜ್ಯ ಭೀಕರವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಮುನ್ನೆಚ್ಚರಿಕೆಯನ್ನು ಈ ಹಿಂದೆಯೇ ಕೊಟ್ಟಿದ್ದಾರೆ' ಎಂದು ಉಲ್ಲೇಖಿಸಿದರು.
"ಬೆಂಗಳೂರಿನ ಅನೇಕ ಕಡೆಗಳಲ್ಲಿ ಪ್ರವಾಹ ವೀಕ್ಷಣೆಗೆ ಹೋದಾಗ ಜನ ತಮಗೆ ನ್ಯಾಯಯುತ ಪರಿಹಾರ ಕೊಡಿಸಿ ಎಂದು ನನ್ನಲ್ಲಿ ಮನವಿ ಮಾಡಿದ್ದಾರೆ. ಇಲ್ಲಿ ಮಳೆ ಬಂದಾಗ ಸಮಸ್ಯೆ ಉಂಟಾಗಲು ಮುಖ್ಯ ಕಾರಣ ರಾಜಕಾಲುವೆಗಳ ಒತ್ತುವರಿ ಮತ್ತು ಚಿಕ್ಕ ಗಾತ್ರದ ಕಾಲುವೆಗಳು ಇರುವುದು. ಸರ್ಕಾರ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಒತ್ತುವರಿ ತೆರವು ಮತ್ತು ಕಾಲುವೆಗಳ ಅಗಲೀಕರಣ ಮಾಡಬೇಕು" ಎಂದರು. "ಒತ್ತುವರಿ ಮಾಡಿಕೊಂಡಿರುವ ಒತ್ತುವರಿದಾರರಿಗೆ ಕ್ರಯಕ್ಕೆ ಮನೆ ನೀಡುವ ಕಾನೂನನ್ನು ಸರ್ಕಾರ ಮಾಡಿದೆ. ಇದರಿಂದ ಅಕ್ರಮಕ್ಕೆ ಸರ್ಕಾರ ನೆರವು ನೀಡಿದಂತೆ ಆಗುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 1953 ಒತ್ತುವರಿ ಪ್ರಕರಣಗಳನ್ನು ಪತ್ತೆಮಾಡಿ, 1300 ಒತ್ತುವರಿಗಳನ್ನು ತೆರವು ಮಾಡಿದ್ದೆವು. ಉಳಿದ 653 ಒತ್ತುವರಿಗಳ ತೆರವು ಕಾರ್ಯ ಪೂರ್ಣಗೊಂಡಿದ್ದರೆ ಇಷ್ಟು ದೊಡ್ಡ ಪ್ರಮಾಣದ ಹಾನಿ ಆಗುತ್ತಿರಲಿಲ್ಲ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಇಲ್ಲ, ಕೆರೆಗಳಲ್ಲಿ ಹೂಳು ತುಂಬಿಕೊಂಡಿದೆ ಹೀಗಾಗಿ ಮಳೆ ಬಂದಾಗ ಸಮಸ್ಯೆ ಉಂಟಾಗುತ್ತದೆ" ಎಂದು ತಿಳಿಸಿದರು.