ಅಹಮದಾಬಾದ್, ಸೆ 13 (DaijiworldNews/DB): ಕನಸುಗಳನ್ನು ಮಾರಾಟ ಮಾಡುವವರು ಗುಜರಾತ್ನಲ್ಲಿ ಗೆಲುವು ಸಾಧಿಸುವುದು ಕೇವಲ ಕನಸಷ್ಟೇ ಎಂದು ಕೇಂದ್ರ ಗೃಹ ಸಚಿವ ಅಮಿಶ್ ಶಾ ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಅವರು ಒಂದು ವರ್ಷ ಪೂರೈಸಿದ ಹಿನ್ನೆಲೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಗುಜರಾತ್ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಕನಸುಗಳನ್ನು ಮಾರಾಟ ಮಾಡಲು ಕೆಲವರು ಮುಂದಾಗಿದ್ದಾರೆ. ಆದರೆ ಅದರಿಂದ ಗೆಲುವು ಸಾಧಿಸುವುದು ಅಸಾಧ್ಯ. ಗುಜರಾತ್ ಜನರ ಬಗ್ಗೆ ನನಗೆ ತಿಳಿದಿದೆ. ಅವರು ಕೆಲಸ ಮಾಡುವವರನ್ನು ಮಾತ್ರ ನಂಬುತ್ತಾರೆ ಎಂದರು.
ಗುಜರಾತ್ ಜನರು ಬಿಜೆಪಿಯೊಂದಿಗಿದ್ದಾರೆ. ಮೂರನೇ ಎರಡರಷ್ಟು ಬಹುಮತದೊಂದಿಗೆ ಗುಜರಾತ್ನಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದವರು ತಿಳಿಸಿದರು.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಕಾರ್ಯವೈಖರಿ ತುಂಬಾ ಉತ್ತಮವಾಗಿದೆ. ಒಂದು ವರ್ಷದಲ್ಲೇ ಜನರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಅವರು ಸಫಲರಾಗಿದ್ದಾರೆ. ಬಹುದೊಡ್ಡ ಜಯವನ್ನು ಸಂಭ್ರಮಿಸುವ ಹಾದಿಯಲ್ಲಿ ಗುಜರಾತ್ ಬಿಜೆಪಿ ಮುನ್ನಡೆಯುತ್ತಿದೆ ಎಂದು ಬಣ್ಣಿಸಿದರು.