ಜೈಪುರ, ಸೆ 13 (DaijiworldNews/DB): ಶೂ ಎಸೆದು ಮುಖ್ಯಮಂತ್ರಿಯಾಗುವುದಾದರೆ ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಅದನ್ನೇ ಮಾಡಲಿ ಎಂದು ರಾಜಸ್ಥಾನ ಸಚಿವ ಅಶೋಕ್ ಚಂದ್ನಾ ಅವರು ಸಚಿನ್ ಪೈಲಟ್ ಅವರಿಗೆ ತಿರುಗೇಟು ನೀಡಿದ್ದಾರೆ.
ಸಚಿನ್ ಪೈಲಟ್ ಬೆಂಬಲಿಗರು ತಾವು ಇದ್ದ ವೇದಿಕೆಯತ್ತ ಪಾದರಕ್ಷೆಗಳನ್ನು ಎಸೆದಿದ್ದಕ್ಕೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಅವರು, ಶೂ ಎಸೆದು ಮುಖ್ಯಮಂತ್ರಿಯಾಗುವುದಾದರೆ ಕೂಡಲೇ ಅವರು ಆ ಕೆಲಸ ಮಾಡಲಿ. ಜಗಳವಾಡಲು ನನಗೆ ಮನಸ್ಸಿಲ್ಲ. ಆದರೆ ಅಂತಹ ಮನಸ್ಸು ಮಾಡುವ ದಿನದಂದು ಸಚಿನ್ ಪೈಲಟ್ ಅವರು ಒಬ್ಬರೇ ಉಳಿಯುತ್ತಾರೆ. ಆದರೆ ಅಂತಹವು ನನಗೆ ಅಗತ್ಯವಿಲ್ಲ ಎಂದವರು ತಿಳಿಸಿದ್ದಾರೆ.
ಪುಷ್ಕರ್ ಸರೋವರದಲ್ಲಿ ಗುರ್ಜರ್ ನಾಯಕ ಕಿರೋರಿ ಸಿಂಗ್ ಬೈನ್ಸ್ಲಾ ಅವರ ಚಿತಾಭಸ್ಮವನ್ನು ವಿಸರ್ಜಿಸುವ ಮುನ್ನ ನಡೆದ ಬೃಹತ್ ಸಮಾವೇಶದಲ್ಲಿ ರಾಜಸ್ಥಾನ ಕ್ರೀಡಾ ಸಚಿವ ಅಶೋಕ್ ಚಂದ್ನಾ ಇದ್ದ ವೇದಿಕೆಯತ್ತ ಶೂ ಎಸೆದ ಘಟನೆ ನಡೆದಿತ್ತು. ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಬೆಂಬಲಿಗರು ಶೂ ಎಸೆದಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಕಾಂಗ್ರೆಸ್ ಮತ್ತು ಬಿಜೆಪಿಯ ಇತರ ನಾಯಕರು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.