ಹೈದರಾಬಾದ್, ಸೆ 13 (DaijiworldNews/DB): ಅಧಿವೇಶನದಲ್ಲಿ ತೆಲಂಗಾಣ ಸ್ಪೀಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಡಿ ಬಿಜೆಪಿ ಶಾಸಕರೊಬ್ಬರನ್ನು ಅಮಾನತು ಮಾಡಲಾಗಿದೆ. ಸದ್ಯ ಅಧಿವೇಶನದಲ್ಲಿ ಬಿಜೆಪಿಯ ಯಾವೊಬ್ಬ ಶಾಸಕರೂ ಇಲ್ಲದಂತಾಗಿದೆ.
ಶಾಸಕ ಏತಾಳಾ ರಾಜೇಂದ್ರ ಅಮಾನತುಗೊಂಡವರು. ಶಾಸಕರ ಏತಾಳಾ ರಾಜೇಂದ್ರ ಅವರು ಸ್ಪೀಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಕಾನೂನು ಸಚಿವ ವೇಮುಲ ಪ್ರಶಾಂತ್ ರೆಡ್ಡಿ ಅವರು ನಿಲುವಳಿ ಸೂಚನೆ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಸ್ಪೀಕರ್ ಪಿ. ಶ್ರೀನಿವಾಸ್ ರೆಡ್ಡಿ ಅಮಾನತು ಆದೇಶ ಮಾಡಿದರು. ಸದ್ಯ ಅಧಿವೇಶನ ಅಂತಿಮಗೊಳ್ಳುವವರೆಗೂ ಅವರು ವಿಧಾನಸಭೆ ಪ್ರವೇಶ ಮಾಡುವಂತಿಲ್ಲ.
ಅಮಾನತು ಆದೇಶಕ್ಕೂ ಮುನ್ನ ಸ್ಪೀಕರ್ ಕ್ಷಮೆ ಯಾಚಿಸುವಂತೆ ರಾಜೇಂದ್ರ ಅವರಿಗೆ ವೇಮುಲ ಪ್ರಶಾಂತ್ ರೆಡ್ಡಿ ಸೂಚಿಸಿದರಾದರೂ, ಅವರು ಕ್ಷಮೆ ಕೇಳದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ತೆಲಂಗಾಣದಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದು, ಶಾಸಕ ರಾಜಾ ಸಿಂಗ್ ಅವರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದ ಕಾರಣಕ್ಕಾಗಿ ಕಳೆದ ತಿಂಗಳು ಅಮಾನತಾಗಿದ್ದರು. ಸದ್ಯ ಅವರು ಜೈಲಿನಲ್ಲಿದ್ದಾರೆ. ಇದೀಗ ಬಿಜೆಪಿಯ ಮತ್ತೊಬ್ಬ ಶಾಸಕ ಕೂಡಾ ಅಮಾನತಾಗಿರುವ ಹಿನ್ನೆಲೆಯಲ್ಲಿ ಈ ಅಧಿವೇಶನಕ್ಕೆ ಬಿಜೆಪಿಯ ಶೂನ್ಯ ಶಾಸಕರಿದ್ದಾರೆ.