ನವದೆಹಲಿ, ಸೆ 13 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ನೆನಪಿಗಾಗಿ ಬಿಜೆಪಿ ವತಿಯಿಂದ ದೇಶಾದ್ಯಂತ ಸೇವಾ ಪಖ್ವಾಡ (ಹದಿನೈದು ದಿನಗಳ ಸೇವೆ) ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿಯವರಿಗೆ 72 ನೇ ವರ್ಷಕ್ಕೆ ಕಾಲಿಡುವ ಹಿಂದಿನ ದಿನದಿಂದ ಅಕ್ಟೋಬರ್ 2ರ ಗಾಂಧಿ ಜಯಂತಿಯವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮೋದಿ ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಂತೆ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ. ಗಿಡ ನೆಡುವುದು, ಸ್ವಚ್ಚತೆ ಕಾಪಾಡುವುದು, ಜಲ ಸಂರಕ್ಷಣೆ ಕುರಿತು ಜನರಿಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದೆ.
ವಿವಿಧತೆಯಲ್ಲಿ ಏಕತೆಯನ್ನು' ಉತ್ತೇಜಿಸಲು ಏಕ್ ಭಾರತ್, ಶ್ರೇಷ್ಠ ಭಾರತ್ ಸಂದೇಶವನ್ನು ದೇಶವಾಸಿಗಳಿಗೆ ಪಸರಿಸಲಾಗುವುದು. ಈಗಾಗಲೇ ಕಾರ್ಯಕ್ರಮ ಸಂಬಂಧಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರಿಂದ ಪಕ್ಷದ ಅಧಿಕಾರಿಗಳು ಮತ್ತು ನಾಯಕರಿಗೆ ಆದೇಶಿಸಿದ್ದು, ವೇಳಾಪಟ್ಟಿಯನುಸಾರ ಕಾರ್ಯಕ್ರಮಗಳು ನಡೆಯಲಿವೆ. ಮೋದಿ ಆಡಳಿತದಲ್ಲಿ ಜಾರಿಗೊಂಡಿರುವ ಸಾಮಾಜಿಕ ಕಾರ್ಯಕ್ರಮ ಮತ್ತು ಅದರ ಪ್ರಯೋಜನ ಪಡೆದ ಜನರು ನೀಡಿದ ಸಂದೇಶಗಳನ್ನೂ ಜನಮನ ತಲುಪಿಸುವ ಕೆಲಸವನ್ನೂ ಇದೇ ವೇಳೆ ಮಾಡಲಾಗುತ್ತದೆ ಎಂದು ಟ್ವೀಟಿಸಿದೆ.