ಭೋಪಾಲ್(ಮಧ್ಯಪ್ರದೇಶ), ಸೆ 13 (DaijiworldNews/DB): ನರ್ಸರಿಯಲ್ಲಿ ಓದುತ್ತಿದ್ದ ಮೂರೂವರೆ ವರ್ಷದ ಮಗುವಿನ ಮೇಲೆ ಶಾಲಾ ಬಸ್ ಚಾಲಕ ಅತ್ಯಾಚಾರವೆಸಗಿದ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ನಡೆದಿದೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಗುರುವಾರ ಈ ಘಟನೆ ನಡೆದಿದ್ದು, ಅತ್ಯಾಚಾರ ಆರೋಪಿ ಬಸ್ ಚಾಲಕ ಹಾಗೂ ಘಟನೆ ನಡೆಯುವ ವೇಳೆ ಬಸ್ನಲ್ಲಿದ್ದ ಮಹಿಳಾ ಅಟೆಂಡರ್ನ್ನು ಬಂಧಿಸಲಾಗಿದೆ. ಮಗುವಿನ ಪೋಷಕರು ನೀಡಿದ ಮಾಹಿತಿ ಮೇರೆಗೆ ಈ ಬಂಧನ ನಡೆದಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಶಾಲೆಯ ಆಡಳಿತ ಮಂಡಳಿ ಘಟನೆಯನ್ನು ಮುಚ್ಚಿಡಲು ಯತ್ನಿಸುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಘಟನೆ ಬಗ್ಗೆ ಶಾಲಾಡಳಿತದ ಪಾತ್ರದ ಬಗ್ಗೆ ತಿಳಿದಿಲ್ಲ. ಆದರೆ ತನಿಖೆ ನಡೆಸಿ ತನಿಖೆಯ ವರದಿಯಾಧಾರಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಗು ಪ್ರಮುಖ ಖಾಸಗಿ ಶಾಲೆಯೊಂದರಲ್ಲಿ ನರ್ಸರಿ ಶಾಲೆಯಲ್ಲಿ ಓದುತ್ತಿದ್ದು, ಆಕೆ ಮನೆಗೆ ಬಸ್ನಲ್ಲಿ ಹಿಂತಿರುಗುತ್ತಿದ್ದ ವೇಳೆ ಕೃತ್ಯ ಎಸಗಲಾಗಿದೆ. ಮನೆಗೆ ಮರಳಿದ ಮಗುವಿನ ಬ್ಯಾಗ್ನಲ್ಲಿ ಇರಿಸಲಾದ ಸ್ಪೇರ್ ಸೆಟ್ನಿಂದ ಮಗುವಿನ ಬಟ್ಟೆಯನ್ನು ಯಾರೋ ಬದಲಾಯಿಸಿದ್ದಾರೆಂಬುದನ್ನು ಮಗುವಿನ ತಾಯಿ ಗಮನಿಸಿದ್ದಾರೆ. ಬಳಿಕ ತರಗತಿ ಶಿಕ್ಷಕಿ ಹಾಗೂ ಪ್ರಾಂಶುಪಾಲರನ್ನು ಈ ಕುರಿತು ವಿಚಾರಿಸಿದಾಗ ಮಗುವಿನ ಬಟ್ಟೆ ಬದಲಾಯಿಸಿಲ್ಲ ಎಂದು ಹೇಳಿದ್ದಾರೆ.
ಆ ಬಳಿಕ ಮಗು ತನ್ನ ಜನನಾಂಗದಲ್ಲಿ ನೋವಾಗುತ್ತಿರುವ ಬಗ್ಗೆ ಪೋಷಕರಲ್ಲಿ ದೂರು ನೀಡಿದ್ದೆ. ಬಳಿಕ ಆಕೆಯ ಕೌನ್ಸೆಲಿಂಗ್ ನಡೆಸಿದಾಗ ಬಸ್ ಚಾಲಕ ಲೈಂಗಿಕ ದೌರ್ಜನ್ಯ ಎಸಗಿ ಬಟ್ಟೆ ಬದಲಿಸಿರುವ ಬಗ್ಗೆ ಹೇಳಿದೆ. ಪೊಲೀಸರು ಶಾಲೆಗೆ ಮಗುವನ್ನು ಕರೆದೊಯ್ದಾಗ ಕೃತ್ಯ ಎಸಗಿದ ಚಾಲಕನ್ನು ಮಗು ಗುರುತಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.