ನವದೆಹಲಿ, ಸೆ 13 (DaijiworldNews/DB): ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಸಿಬಿಐ ಏಕಕಾಲದಲ್ಲಿ ದಾಳಿ ನಡೆಸುತ್ತಿದೆ.
ಕರ್ನಾಟಕದಲ್ಲಷ್ಟೇ ಸದ್ದು ಮಾಡಿದ್ದ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಇದೀಗ ಜಮ್ಮು-ಕಾಶ್ಮೀರ, ಹರಿಯಾಣ, ಗುಜರಾತ್, ನವದೆಹಲಿ, ಉತ್ತರ ಪ್ರದೇಶಗಳ ವಿವಿಧೆಡೆ ಸಿಬಿಐ ದಾಳಿ ನಡೆಸುವ ಮೂಲಕ ಅಲ್ಲೂ ಸದ್ದು ಮಾಡುತ್ತಿದೆ. ಇಲ್ಲಿಯೂ ಹಗರಣ ನಡೆದಿರುವ ಬಗ್ಗೆ ಮಾಹಿತಿ ಆಧರಿಸಿ ಆರು ರಾಜ್ಯಗಳ 33 ಸ್ಥಳಗಳಲ್ಲಿ ಅಧಿಕಾರಿಗಳಿಂದ ಶೋಧ ಕಾರ್ಯ ನಡೆಯುತ್ತಿದ್ದು, ಕರ್ನಾಟಕದ ಬೆಂಗಳೂರು, ಹರಿಯಾಣದ ಕರ್ನಾಲ್, ಮಹೇಂದರ್ಗಢ, ರೇವಾರಿ, ಗುಜರಾತ್ನ ಗಾಂಧಿನಗರ; ಉತ್ತರಪ್ರದೇಶದ ಗಾಜಿಯಾಬಾದ್ ಹಾಗೂ ನವದೆಹಲಿಯಲ್ಲಿ ಸಿಬಿಐ ಶೋಧಕಾರ್ಯ ಈಗಾಗಲೇ ನಡೆದಿದೆ.
ಇದಲ್ಲದೆ, ಜಮ್ಮುವಿನ 14, ಶ್ರೀನಗರದ ಒಂದು, ಹರಿಯಾಣದ 13, ಗಾಂಧಿನಗರದ ಒಂದು ಮತ್ತು ಬೆಂಗಳೂರಿನಲ್ಲಿ ಒಂದು ಕಡೆಯೂ ಈಗಾಗಲೇ ದಾಳಿ ನಡೆದಿದೆ ಎಂದೂ ತಿಳಿದು ಬಂದಿದೆ. ಕಾಶ್ಮೀರ ಸೇವಾ ಆಯೋಗದ ಮಾಜಿ ಪರೀಕ್ಷಾ ನಿಯಂತ್ರಕ ಅಶೋಕ್ ಕುಮಾರ್ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.