ನವದೆಹಲಿ, ಸೆ 13 (DaijiworldNews/DB): ವ್ಯಕ್ತಿಯೊಬ್ಬ ಅಟೋಮ್ಯಾಟಿಕ್ ಕಾರಿನ ಬೋನೆಟ್ ತೆರೆದು ಕಾರನ್ನು ರಿಪೇರಿ ಮಾಡುತ್ತಿದ್ದ ವೇಳೆ ಏಕಾಏಕಿ ಮುಂದೆ ಬಂದ ಕಾರು ವ್ಯಕ್ತಿಯ ಮೇಲೆ ಹರಿದ ಭಯಾನಕ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವ್ಯಕ್ತಿಯನ್ನು ಮೆಕ್ಯಾನಿಕ್ ಎನ್ನಲಾಗುತ್ತಿದ್ದು, ಆತ ನಿಂತಿದ್ದ ಕಾರನ್ನು ರಿಪೇರಿ ಮಾಡುತ್ತಿದ್ದ. ಬೋನೆಟ್ ತೆರೆದು ಕಾರನ್ನು ಪರಿಶೀಲಿಸುತ್ತಿದ್ದ ವೇಳೆ ಕಾರು ಏಕಾಏಕಿ ಮುಂಭಾಗಕ್ಕೆ ಸಂಚರಿಸಿದ್ದು, ವ್ಯಕ್ತಿಯ ಮೇಲೆಯೇ ಹರಿದಿದೆ. ಅಲ್ಲದೆ ವ್ಯಕ್ತಿಯನ್ನು ದೂಡಿಕೊಂಡು ಮುಂಭಾಗದಲ್ಲಿದ್ದ ಕಟ್ಟಡವೊಂದರ ಸ್ಟೀಲ್ಗೇಟ್ಗೆ ಮುಖಮಾಡಿ ನಿಂತಿದೆ. ಪರಿಣಾಮ ವ್ಯಕ್ತಿ ಸ್ಟೀಲ್ಗೇಟ್ ಮತ್ತು ಕಾರಿನ ನಡುವೆ ಸಿಲುಕಿಕೊಂಡ ಘಟನೆ ನಡೆದಿದೆ. ಘಟನೆಯಲ್ಲಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ವೀಡಿಯೋವನ್ನು ಟ್ವೀಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಅಟೋಮ್ಯಾಟಿಕ್ ವಾಹನಗಳು ಹಾಳಾದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸದೆ ಅಂತಹ ವಾಹನಗಳ ಎದುರು ನಿಲ್ಲದಿರಿ. ಸ್ನೇಹಿತರು, ಸಂಬಂಧಿಕರಿಗೂ ಈ ವಿಚಾರವನ್ನು ತಿಳಿಸಿ ಎಂಬುದಾಗಿ ಮನವಿ ಮಾಡಿಕೊಂಡಿದ್ದಾರೆ. ವೀಡಿಯೋವು 187,000ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದು, ಹಲವರು ಮುನ್ನೆಚ್ಚರಿಕೆಗಳ ಬಗ್ಗೆ ಸಲಹೆ ನೀಡಿದ್ದಾರೆ. ಕಾರಿನ ಬೋನೆಟ್ ರಿಪೇರಿ ವೇಳೆ ಒಬ್ಬರು ಹ್ಯಾಂಡ್ಬ್ರೇಕ್ ಹಿಡಿದುಕೊಳ್ಳುವುದು ಅತೀ ಅವಶ್ಯ ಎಂದೂ ಕಮೆಂಟ್ ಮಾಡಿದ್ದಾರೆ.