ಭುವನೇಶ್ವರ, ಸೆ 13 (DaijiworldNews/DB): ಕೊಹಿನೂರ್ ವಜ್ರವು ಜಗನ್ನಾಥ ದೇವರಿಗೆ ಸೇರಿದ್ದಾಗಿದ್ದು, ಯುಕೆಯಿಂದ ಅದನ್ನು ತರಿಸಿಕೊಡುವಂತೆ ಒಡಿಶಾದ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯೊಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದೆ.
12ನೇ ಶತಮಾನದ ಶ್ರೀ ಜಗನ್ನಾತ ದೇಗುಲಕ್ಕೆ ಕೊಹಿನೂರ್ ವಜ್ರವನ್ನು ಮರಳಿ ತರುವ ನಿಟ್ಟಿನಲ್ಲಿ ಪ್ರಕ್ರಿಯೆ ಸುಲಭಗೊಳಿಸಲು ತಾವು ಮಧ್ಯಸ್ಥಿಕೆ ವಹಿಸಬೇಕು ಎಂದು ಪುರಿ ಮೂಲದ ಶ್ರೀ ಜಗನ್ನಾಥ ಸೇನೆಯು ಮನವಿ ಸಲ್ಲಿಸಿದೆ.
ರಾಣಿ ಎಲಿಜಬೆತ್-2 ಅವರ ನಿಧನಾನಂತರ ಅವರ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್ ಅವರು ಬ್ರಿಟನ್ ರಾಜನಾಗಿ ಅಧಿಕಾರ ವಹಿಸಿಕೊಂಡಿರುವುದರಿಂದ ನಿಯಮಾನುಸಾರ ಅವರ ಪತ್ನಿ ಕಾರ್ನ್ವಾಲ್ ಕ್ಯಾಮಿಲ್ಲಾ ಅವರು ಈ ವಜ್ರವನ್ನು ಧರಿಸಲಿದ್ದಾರೆ. 21.6 ಗ್ರಾಂ. ತೂಕದ 105.6 ಕ್ಯಾರೆಟ್ ವಜ್ರ ಇದರಲ್ಲಿದ್ದು, ವಿಶ್ವದ ಅತ್ಯಂತ ಅಮೂಲ್ಯ ರತ್ನಗಳಲ್ಲಿ ಇದೂ ಒಂದಾಗಿದೆ. 14 ನೇ ಶತಮಾನದಲ್ಲಿ ದಕ್ಷಿಣ ಭಾರತದ ಕೊಲ್ಲೂರು ಗಣಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆಯ ಸಮಯದಲ್ಲಿ ಕೊಹಿನೂರ್ ವಜ್ರ ಪತ್ತೆಯಾಗಿತ್ತು.
ಪಂಜಾಬ್ನ ಮಹಾರಾಜ ರಣಜಿತ್ ಸಿಂಗ್ ಅವರು ಜಗನ್ನಾಥ ದೇವಿಗೆ ಈ ಕೊಹಿನೂರ್ ವಜ್ರವನ್ನು ದಾನ ಮಾಡಿದ್ದರು. 1839 ರಲ್ಲಿ ಅವರು ನಿಧನರಾದ ಬಳಿಕ ದಶಕಾನಂತರ ಅವರ ಮಗ ದುಲೀಪ್ ಸಿಂಗ್ನಿಂದ ಬ್ರಿಟಿಷರು ಈ ವಜ್ರವನ್ನು ಕಿತ್ತುಕೊಂಡರು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಬಳಿಕ1937ರಿಂದ ಈ ವಜ್ರ ಬ್ರಿಟಿಷ್ ಕ್ರೌನ್ನಲ್ಲಿದೆ ಎಂದು ತಿಳಿದು ಬಂದಿದೆ.
ವಜ್ರವನ್ನು ಮರಳಿ ತರುವ ವಿಷಯವನ್ನು 2016ರಲ್ಲಿ ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಸಂಸದ ಭೂಪಿಂದರ್ ಸಿಂಗ್ ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಿದ್ದರು. ಪುರಿಯ ಬಿಜೆಪಿ ಶಾಸಕ ಜಯಂತ್ ಸಾರಂಗಿ ಕೂಡ ವಜ್ರ ಮರಳಿ ತರುವ ವಿಚಾರವಾಗಿ ವಿಧಾನಸಭೆಯಲ್ಲಿ ಪ್ರಸ್ತಾಪಿಸುವ ಭರವಸೆ ನೀಡಿದ್ದರು.