ಬೆಂಗಳೂರು, ಸೆ 13 (DaijiworldNews/HR): ಕಾಂಗ್ರೆಸ್ ಕಳಿಸಿದ ದೋಸೆಗಾಗಿ 24ಗಂಟೆ ಬಾಯಲ್ಲಿ ನೀರು ಸುರಿಸಿಕೊಂಡು ಕಾಯುವಷ್ಟು ಒಬ್ಬ ಸಂಸದನಿಗೆ ಪುರಸೊತ್ತಿದೆ ಎಂದಾದ್ರೆ ಅವರು ದೋಸೆ ತಿನ್ನಲಷ್ಟೇ ಲಾಯಕ್ಕು ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ದ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬೆಳ್ಳಂದೂರಿನಲ್ಲಿ ಜನ ಮುಳುಗಿದರೆ ನಾನೇನು ಮಾಡಲಿ ಎನ್ನುವ ಕೆಲಸಕ್ಕೆ ಬಾರದ ಸಂಸದ ತೇಜಸ್ವಿ ಸೂರ್ಯ ಅವರು ನಿರುದ್ಯೋಗಿಯಾಗಿದ್ದಾರೆ. ಕಾಂಗ್ರೆಸ್ ಕಳಿಸಿದ ದೋಸೆಗಾಗಿ 24ಗಂಟೆ ಬಾಯಲ್ಲಿ ನೀರು ಸುರಿಸಿಕೊಂಡು ಕಾಯುವಷ್ಟು ಒಬ್ಬ ಸಂಸದನಿಗೆ ಪುರಸೊತ್ತಿದೆ ಎಂದಾದ್ರೆ ಅವರು ದೋಸೆ ತಿನ್ನಲಷ್ಟೇ ಲಾಯಕ್ಕು. ಬಿಟ್ಟಿ ತಿನ್ನೋದಸ್ಟೇ ಬಿಜೆಪಿ ಕಾಯಕವೇ!? ಎಂದು ಪ್ರಶ್ನಿಸಿದೆ.
ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದು ಹಲವು ಪ್ರದೇಶಗಳು ಜಲಾವೃತಗೊಂಡಿದ್ದ ವೇಳೆ ಸಂಸದ ತೇಜಸ್ವಿ ಸೂರ್ಯ ಪದ್ಮನಾಭನಗರದ ಹೋಟೆಲ್ನಲ್ಲಿ ಮಸಾಲೆ ದೋಸೆ ತಿನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಸಂಕಷ್ಟ ಎದುರಿಸುತ್ತಿರಬೇಕಾದರೆ, ಸಂಸದರು ಈ ರೀತಿ ಹೋಟೆಲ್ ನಲ್ಲಿ ದೋಸೆ ತಿನ್ನುತ್ತಿರುವ ವಿಡಿಯೋವನ್ನು ಖಂಡಿಸಿದ್ದ ಕಾಂಗ್ರೆಸ್ ಪಕ್ಷ, ಸಂಸದರ ಮನೆಗೆ ದೋಸೆ ಕಳಿಸುವ ಮೂಲಕ ಪ್ರತಿಭಟನೆ ನಡೆಸಿತ್ತು.
ಈ ಕುರಿತಾಗಿ ನಿನ್ನೆ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, ಎಲ್ಲಿದೆ ದೋಸೆ? 24 ಗಂಟೆಯಾದರೂ ನನ್ನ ಮನೆಗೆ ದೋಸೆ ಬಂದಿಲ್ಲ, ದೋಸೆ ವಿಚಾರದಲ್ಲೂ ಕಾಂಗ್ರೆಸ್ ಮೋಸ ಮಾಡುತ್ತಿದೆ. ಅವರಿಗೆ ಸರಿಯಾಗಿ ದೋಸೆ ಕೊಡಲು ಸಾಧ್ಯವಿಲ್ಲ. ಹೀಗಿದ್ದರೂ ಉತ್ತಮ ಆಡಳಿತ ನೀಡುವ ಕನಸು ಕಾಣುತ್ತಾರೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದರು.
ಇಂದು ಮತ್ತೆ ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿರುವ ಕಾಂಗ್ರೆಸ್, ದೋಸೆಗಾಗಿ 24ಗಂಟೆ ಬಾಯಲ್ಲಿ ನೀರು ಸುರಿಸಿಕೊಂಡು ಕಾಯುವಷ್ಟು ಒಬ್ಬ ಸಂಸದನಿಗೆ ಪುರಸೊತ್ತಿದೆ ಎಂದಾದ್ರೆ ಅವರು ದೋಸೆ ತಿನ್ನಲಷ್ಟೇ ಲಾಯಕ್ಕು ಎಂದು ವ್ಯಂಗ್ಯವಾಡಿದೆ.