ಭೋಪಾಲ, ಸೆ 13 (DaijiworldNews/HR): ಮಧ್ಯ ಪ್ರದೇಶದ ಭೋಪಾಲದಲ್ಲಿ ವಿಚ್ಛೇದನಕ್ಕೆ ಆಮಂತ್ರಣ ಪತ್ರ ಮಾಡಿಸಿರುವ ವಿಚಿತ್ರ ಘಟನೆ ನಡೆದಿದ್ದು, ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಭಾಯಿ ವೆಲ್ಫೆರ್ ಸೊಸೈಟಿ ಹೆಸರಿನ ಎನ್ಜಿಒ ಭೋಪಾಲದ ಹೊರವಲಯದಲ್ಲಿರುವ ರೆಸಾರ್ಟ್ನಲ್ಲಿ ಸೆ.19ರಂದು ವಿಚ್ಛೇದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇನ್ನು ಕಾರ್ಯಕ್ರಮದಲ್ಲಿ ವರಮಾಲೆ ವಿಸರ್ಜಿಸುವುದು, ಪುರುಷರ ಸಂಗೀತ ಕಾರ್ಯಕ್ರಮ, ಮನುಷ್ಯನ ಘನತೆಗಾಗಿ ಸಪ್ತಪದಿ, ಸದ್ಬುದ್ಧಿ ಶುದ್ಧೀಕರಣ ಯಜ್ಞ ಮುಂತಾದ ವಿಶೇಷ ಕಾರ್ಯಕ್ರಮ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಇದು ದಾಂಪತ್ಯ ಮುರಿಯುವುದನ್ನು ಉತ್ತೇಜಿಸುವ ಕಾರ್ಯಕ್ರಮ ಎಂದು ಅನೇಕರು ವಿರೋಧಿಸಿ, ಪ್ರತಿಭಟನೆ ನಡೆಸಿದ್ದರಿಂದ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಎನ್ಜಿಒ, ಬಾಯ್ಕಟ್ ಮ್ಯಾರೇಜ್ನಿಂದ ಬಚಾವಾಗದ ಪುರುಷರು ವಿಚ್ಛೇದನದ ಮೂಲಕ ಸ್ವಾತಂತ್ರ್ಯ ಪಡೆಯುತ್ತಾರೆ. ಅದನ್ನು ಸಂಭ್ರಮಿಸುವ ನಿಟ್ಟಿನಲ್ಲಿ ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು ಎಂದಿದ್ದಾರೆ.