ಬೆಂಗಳೂರು, ಸೆ 12 (DaijiworldNews/HR): ಸಂಸದ ತೇಜಸ್ವಿ ಸೂರ್ಯ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ಮಸಾಲೆ ದೋಸೆಯನ್ನು ಪಾರ್ಸಲ್ ಕಳುಹಿಸಿ ಕೊಟ್ಟಿದ್ದು, ದೋಸೆ ಡೆಲಿವರಿ ಮಾಡಲು ಬಂದವರನ್ನು ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುಂಜಾಗೃತಾ ಕ್ರಮವಾಗಿ ಗಿರಿನಗರ ಪೊಲೀಸರು ದೋಸೆ ಡೆಲಿವರಿಗೆ ಬಂದಿದ್ದ ವಿನೋದ್ ಕುಮಾರ್, ವಿಶ್ವನಾಥ್ ಹಾಗೂ ನೂರ್ ಸಿಂಗ್ ಎಂಬುವವರನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು,ಈ ಘಟನೆ ಸಂಬಂಧಪಟ್ಟಂತೆ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ವರದಿಯಾಗಿದೆ.
ತೇಜಸ್ವಿ ಸೂರ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಎಲ್ಲಿದೆ ದೋಸೆ? 24 ಗಂಟೆಯಾದರೂ ನನ್ನ ಮನೆಗೆ ದೋಸೆ ಬಂದಿಲ್ಲ, ದೋಸೆ ವಿಚಾರದಲ್ಲೂ ಕಾಂಗ್ರೆಸ್ ಮೋಸ ಮಾಡುತ್ತಿದೆ. ಅವರಿಗೆ ಸರಿಯಾಗಿ ದೋಸೆ ಕೊಡಲು ಸಾಧ್ಯವಿಲ್ಲ. ಹೀಗಿದ್ದರೂ ಉತ್ತಮ ಆಡಳಿತ ನೀಡುವ ಕನಸು ಕಾಣುತ್ತಾರೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದರು.
ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದು ಹಲವು ಪ್ರದೇಶಗಳು ಜಲಾವೃತಗೊಂಡಿದ್ದ ವೇಳೆ ಸಂಸದ ತೇಜಸ್ವಿ ಸೂರ್ಯ ಪದ್ಮನಾಭನಗರದ ಹೋಟೆಲ್ನಲ್ಲಿ ಮಸಾಲೆ ದೋಸೆ ತಿನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಜನರು ಸಂಕಷ್ಟ ಎದುರಿಸುತ್ತಿರಬೇಕಾದರೆ, ಸಂಸದರು ಈ ರೀತಿ ಹೋಟೆಲ್ ನಲ್ಲಿ ದೋಸೆ ತಿನ್ನುತ್ತಿರುವ ವಿಡಿಯೋವನ್ನು ಖಂಡಿಸಿದ್ದ ಕಾಂಗ್ರೆಸ್ ಪಕ್ಷ, ಸಂಸದರ ಮನೆಗೆ ದೋಸೆ ಕಳಿಸುವ ಮೂಲಕ ಪ್ರತಿಭಟನೆ ನಡೆಸಿತ್ತು.