ಇಡುಕ್ಕಿ, ಸೆ 12 (DaijiworldNews/MS): ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಸೋಮವಾರ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಬಸ್ ಬೆಟ್ಟದಿಂದ 15 ಕಂದಕಕ್ಕೆ ಬಿದ್ದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, 58 ಮಂದಿ ಗಾಯಗೊಂಡಿದ್ದಾರೆ.
ಗುಡ್ಡಗಾಡು ಪ್ರದೇಶವಾದ ಚೀಯಪ್ಪಾರ ಮತ್ತು ನೆರಿಯಮಂಗಲಂ ನಡುವೆ ಬೆಳಗ್ಗೆ ಈ ಘಟನೆ ನಡೆದಿದೆ .ಪೊಲೀಸರ ಪ್ರಕಾರ, ಎರ್ನಾಕುಲಂನಿಂದ ಮುನ್ನಾರ್ಗೆ ತೆರಳುತ್ತಿದ್ದ ಬಸ್ ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡುತ್ತಿದ್ದಾಗ ಅದರ ಒಂದು ಟೈರ್ ಒಡೆದು ಹಳ್ಳಕ್ಕೆ ಬಿದ್ದಿದೆ. ಆದರೆ, ಮರಕ್ಕೆ ಡಿಕ್ಕಿ ಹೊಡೆದು ನಿಂತಿದ್ದರಿಂದ ಅದೃಷ್ಟವಶಾತ್ ಕೆಳಗಿರುವ ಆಳವಾದ ಕಂದಕಕ್ಕೆ ಬೀಳುವ ಅವಘಡ ತಪ್ಪಿದೆ.
"ಅಪಘಾತ ಸಂಭವಿಸಿದ ತಕ್ಷಣ, ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಎದುರಿನಿಂದ ಬಂದ ಯಾವುದೋ ವಾಹನ ಬಸ್ಗೆ ಡಿಕ್ಕಿ ಹೊಡೆದಂತೆನಿಸಿತು ಎಂದು ಚಾಲಕ ಹೇಳಿದರು. ಜೋರು ಮಳೆಯಾಗುತ್ತಿದ್ದರಿಂದ ನಾನು ಆಭಾಗದ ಕಿಟಕಿಯ ಶೆಟರ್ಗಳನ್ನು ಹಾಕಿಕೊಂಡಿದ್ದೆ. ಏನಾಯ್ತು ಎಂಬುದು ನನಗೆ ತಿಳಿಯಲಿಲ್ಲ " ಎಂದು ಕಂಡೆಕ್ಟರ್ ವಿವರಿಸಿದ್ದಾರೆ.
ಬಸ್ಸಿನಲ್ಲಿ 60 ಮಂದಿ ಪ್ರಯಾಣಿಕರು ಇದ್ದು ಎಲ್ಲಾ ಗಾಯಾಳುಗಳನ್ನು ಎರ್ನಾಕುಲಂನ ಕಲಮಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.