ನೋಯ್ಡಾ, ಸೆ 12 (DaijiworldNews/MS): ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ತಯಾರಿಸುವ ಸಂಸ್ಥೆಯೊಂದರಲ್ಲಿ ಸೊಳ್ಳೆ ನಿವಾರಕ ಸ್ಪ್ರೇ ಸಿಂಪಡಿಸಿದ ಬಳಿಕ ಕೆಲಸ ಮಾಡುತ್ತಿದ್ದ 16 ಮಹಿಳಾ ಉದ್ಯೋಗಿಗಳು ಮೂರ್ಛೆ ಹೋಗಿ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಭಾನುವಾರ ನಡೆದಿದೆ. ಆ ಬಳಿಕ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಎಲ್ಲರೂ ಚೇತರಿಸಿಕೊಂಡಿದ್ದಾರೆ.
ಭಾನುವಾರದಂದು ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾಗ ಆಡಳಿತ ಮಂಡಳಿ ಸೊಳ್ಳೆ ನಿವಾರಕ ಸ್ಪ್ರೇ ಸಿಂಪಡಣೆ ಮಾಡಿದ್ದಾರೆ. ಆದರೆ ಇದಾದ ಕೆಲಕ್ಷಣಗಳಲ್ಲೇ 16 ಮಹಿಳಾ ಸಿಬ್ಬಂದಿಗಳು ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ಕೆಲವರು ಕೆಮ್ಮು, ಉಸಿರಾಟ ತೊಂದರೆ ಅನುಭವಿಸಿ ನರಳಿದ್ದಾರೆ. ಘಟನೆ ಬಳಿಕ ಕಂಪನಿಯಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಚಿಕಿತ್ಸೆ ನೀಡಿದ ಬಳಿಕ ಎಲ್ಲ ಮಹಿಳಾ ಸಿಬ್ಬಂದಿ ಚೇತರಿಸಿಕೊಂಡಿದ್ದಾರೆ. ಸ್ಪ್ರೇಯಲ್ಲಿನ ಹೆಚ್ಚಿನ ಪ್ರಮಾಣದ ರಾಸಾಯನಿಕ ದೇಹ ಸೇರಿದ ಕಾರಣ ಪ್ರಜ್ಞೆ ಬಿದ್ದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸುದ್ದಿ ತಿಳಿದ ತಕ್ಷಣ ಕಾರ್ಮಿಕರ ಕುಟುಂಬಸ್ಥರು ಕಂಪನಿ ಮುಂದೆ ಜಮಾಯಿಸಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಪೊಲೀಸರಿಗೂ ದೂರು ನೀಡಿದ್ದಾರೆ.