ನವದೆಹಲಿ, ಸೆ 12 (DaijiworldNews/HR): ಭಾರತದ ಹೈನುಗಾರಿಕೆ ಕ್ಷೇತ್ರದ ನಿಜವಾದ ನಾಯಕರು ಮಹಿಳೆಯರಾಗಿದ್ದು, ಭಾರತದ ಹೈನುಗಾರಿಕೆ ಸಹಕಾರಿ ವಲಯದ ಮೂರನೇ ಒಂದು ಭಾಗದಷ್ಟು ಸದಸ್ಯರು ಮಹಿಳೆಯರೇ ಆಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ಪೋ ಸೆಂಟರ್ ಮತ್ತು ಮಾರ್ಟ್ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಡೈರಿ ಫೆಡರೇಷನ್ ವರ್ಲ್ಡ್ ಡೈರಿ ಶೃಂಗಸಭೆ (ಐಡಿಎಫ್ ಡಬ್ಲ್ಯೂಡಿಎಸ್) 2022 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಡೈರಿ ವಲಯದ ಕಾರ್ಮಿಕರಲ್ಲಿ ಶೇ.70ರಷ್ಟು ಮಹಿಳೆಯರಿದ್ದು, ಭಾರತದ ಹೈನುಗಾರಿಕೆ ಸಹಕಾರಿ ವಲಯದ ಮೂರನೇ ಒಂದು ಭಾಗದಷ್ಟು ಸದಸ್ಯರು ಮಹಿಳೆಯರೇ ಆಗಿದ್ದಾರೆ ಎಂದರು.
ಇನ್ನು ಕಡಿಮೆ ಆದಾಯದ ರೈತರು ಭಾರತದ ಹೈನುಗಾರಿಕೆ ಕ್ಷೇತ್ರದ ಬೆನ್ನೆಲುಬು. 'ಭಾರತದ ಹೈನುಗಾರಿಕೆ ವಲಯವನ್ನು ಸಾಮೂಹಿಕ ಉತ್ಪಾದನೆಗಿಂತ ಹೆಚ್ಚಾಗಿ ಜನಸಮೂಹದ ಉತ್ಪಾದನೆಯಿಂದ ಗುರುತಿಸಲಾಗುತ್ತದೆ ಎಂದಿದ್ದಾರೆ.
ದೇಶದಲ್ಲಿನ ಡೈರಿ ಸಹಕಾರಿ ವ್ಯವಸ್ಥೆ ದೇಶದಲ್ಲಿ ದೊಡ್ಡ ಜಾಲವನ್ನು ಹೊಂದಿದ್ದು, ಅಲ್ಲಿ 2 ಕೋಟಿಗೂ ಹೆಚ್ಚು ರೈತರಿಂದ 2 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ ದಿನಕ್ಕೆ ಎರಡು ಬಾರಿ ಹಾಲು ಸಂಗ್ರಹಿಸಲಾಗುತ್ತದೆ ಎಂದು ಹೇಳಿದ್ದಾರೆ.