ಮುಂಬೈ, ಸೆ 12 (DaijiworldNews/MS): ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ಯಾತ್ರೆ’ ಇದೀಗ ಕೇರಳರಾಜ್ಯವನ್ನು ಪ್ರವೇಶಿಸಿದೆ. 150 ದಿನಗಳ ಈ ಪಾದಯಾತ್ರೆ ಈಗಾಗಲೇ ಐದು ದಿನಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟೊಂದನ್ನು ಮಾಡಿದ್ದು ಇದು ಬಿಜೆಪಿಯ ಸಿಡಿಮಿಡಿಗೆ ಕಾರಣವಾಗಿದೆ.
ಆರೆಸ್ಸೆಸ್ಸ್ ಸಮವಸ್ತ್ರವಾದ ಖಾಕಿ ಚಡ್ಡಿಯು ಬೆಂಕಿಯಿಂದ ದಹಿಸುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ ಕಾಂಗ್ರೆಸ್ ಅದಕ್ಕೆ " ದೇಶವನ್ನು ದ್ವೇಷದ ಸಂಕೋಲೆಯಿಂದ ಮುಕ್ತಗೊಳಿಸಲು ಮತ್ತು ಬಿಜೆಪಿ - ಆರ್ಎಸ್ಎಸ್ ಮಾಡಿದ ಹಾನಿಯನ್ನು ಅಳಿಸಲು ನಾವುಹಂತ ಹಂತವಾಗಿ, ನಮ್ಮ ಗುರಿಯನ್ನು ತಲುಪುತ್ತೇವೆ. ಭಾರತ್ ಜೋಡೋ ಎಂದು ಕಾಂಗ್ರೆಸ್ ಬರೆದುಕೊಂಡಿದೆ.
ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ಈ ಚಿತ್ರವು ಕಾಂಗ್ರೆಸ್ ರಾಜಕೀಯದ ಸಂಕೇತವಾಗಿದೆ. ಯಾಕೆಂದರೆ ಕಾಂಗ್ರೆಸ್ ಪಕ್ಷ ದೇಶದಲ್ಲಿ ಬೆಂಕಿ ಹೊತ್ತಿಸುತ್ತಿದೆ.ಅವರು ಹಿಂದೆ ಹೊತ್ತಿಸಿದ ಬೆಂಕಿಯು ಭಾರತದ ಬಹುತೇಕ ಭಾಗಗಳಲ್ಲಿ ಅವರಿಸಿ ಅವರನ್ನೇ ಸುಟ್ಟುಹಾಕಿದೆ.ಈ ಪಕ್ಷ ಉಳಿದುಕೊಂಡಿರುವ ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಉರಿದು ಶೀಘ್ರ ಬೂದಿಯಾಗುತ್ತದೆ . ಈ ಟ್ವೀಟನ್ನು ಸೇವ್ ಮಾಡಿ ಇರಿಸಿಕೊಳ್ಳಿ" ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
3,500 ಕಿಲೋಮೀಟರ್ ಉದ್ದದ ಈ ಭಾರತ್ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ಕಳೆದ 1 ಶತಮಾನದಲ್ಲಿ ದೇಶದಲ್ಲಿ ನಡೆದ ಅತಿ ಉದ್ದದ ಪಾದಯಾತ್ರೆ ಎಂದು ಕರೆದಿದೆ. ಈ ಯಾತ್ರೆಯು 150 ದಿನಗಳಲ್ಲಿ 3,570 ಕಿ.ಮೀ ಕ್ರಮಿಸಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಭಾರತ್ ಜೋಡೋ ಯಾತ್ರೆ ಕೊನೆಗೊಳ್ಳಲಿದೆ.