ನವದೆಹಲಿ, ಸೆ 12 (DaijiworldNews/MS): ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆಗೆ ಸಂಬಂಧಿಸಿ ಶಂಕಿತ ಭಯೋತ್ಪಾದಕ ಗ್ಯಾಂಗ್ಗಳಿಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಭಯೋತ್ಪಾದನಾ ನಿಗ್ರಹ ಕಾರ್ಯಪಡೆ ಸೋಮವಾರ ದೆಹಲಿ, ಎನ್ಸಿಆರ್, ಹರಿಯಾಣ ಮತ್ತು ಪಂಜಾಬ್ನ ವಿವಿಧ ಸ್ಥಳಗಳಲ್ಲಿ ಶೋಧ ಆರಂಭಿಸಿದೆ.
ಭಾನುವಾರ, ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಚಂಡೀಗಢ ಪೊಲೀಸರು ಕೊನೆಯ ಆರೋಪಿ ಶೂಟರ್ ದೀಪಕ್ ಮುಂಡಿ ಮತ್ತು ಆತನ ಇಬ್ಬರು ಸಹಾಯಕರನ್ನು ಪಶ್ಚಿಮ ಬಂಗಾಳದ ಇಂಡೋ-ನೇಪಾಳ ಗಡಿಯಲ್ಲಿ ಬಂಧಿಸಿದ್ದಾರೆ. ಇದುವರೆಗೆ ಪಂಜಾಬ್ ಪೊಲೀಸರು ಗಾಯಕನ ಬರ್ಬರ ಹತ್ಯೆ ಪ್ರಕರಣದಲ್ಲಿ 23 ಆರೋಪಿಗಳನ್ನು ಬಂಧಿಸಿದ್ದಾರೆ.
ಪಂಜಾಬ್ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿದ್ದ ಜನಪ್ರಿಯ ಪಂಜಾಬಿ ಗಾಯಕ ಮತ್ತು ರಾಪರ್ ಸಿಧು ಮೂಸೆ ವಾಲಾ ಅವರನ್ನು ಕಳೆದ ಮೇ ತಿಂಗಳಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮೂಸೆ ವಾಲಾ ಅವರು ಮಾನ್ಸಾದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಮ್ ಆದ್ಮಿ ಪಾರ್ಟಿಯ ಡಾ.ವಿಜಯ್ ಸಿಂಗ್ಲಾ ವಿರುದ್ಧ 63,323 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಸಿಧು ಮೂಸೆ ವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಪಂಜಾಬ್ ಸರ್ಕಾರ ವಾಪಸ್ ಪಡೆದ ಬೆನ್ನಲ್ಲೇ ಸಿಧು ಮೂಸೆವಾಲಾ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.