ಬೆಂಗಳೂರು , ಸೆ 10 (DaijiworldNews/MS): ಅರಣ್ಯ ಸಂರಕ್ಷಣೆ ಸಂದರ್ಭದಲ್ಲಿ ಹುತಾತ್ಮರಾಗುವ ಅರಣ್ಯ ಸಿಬ್ಬಂದಿಗಳಿಗೆ ಇನ್ನು ಮುಂದೆ 50 ಲಕ್ಷ ರೂ. ಪರಿಹಾರ ನೀಡಲು ರಾಜ್ಯಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಅರಣ್ಯ ಭವನದಲ್ಲಿಂದು ಆಯೋಜಿಸಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರಣ್ಯ ಇಲಾಖೆ ಹುತಾತ್ಮರಿಗೆ ನೀಡುತ್ತಿರುವ ಪರಿಹಾರವನ್ನು 30 ರಿಂದ 50 ಲಕ್ಷ ರೂ.ಗಳಿಗೆ ಏರಿಕೆ ಮಾಡಿರುವುದಾಗಿ ಪ್ರಕಟಿಸಿದರು.
"ಈ ಹಿಂದೆ ಅರಣ್ಯ ಹುತಾತ್ಮರಿಗೆ 20 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅದನ್ನು 30 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ್ದರು. ಈಗ ಇದನ್ನು 50 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ್ದೇನೆ " ಎಂದವರು ಪ್ರಕಟಿಸಿದರು.
ಹುತಾತ್ಮರ ನೇಮಕಾತಿ, ಕಲ್ಯಾಣ ಎಲ್ಲವನ್ನೂ ಸರ್ಕಾರ ಅತ್ಯಂತ ಸಹಾನುಭೂತಿಯಿಂದ ಮಾಡಲಿದೆ. ನೀವು ಅರಣ್ಯ ರಕ್ಷಣೆ ಮಾಡಿ, ಸರ್ಕಾರ ನಿಮ್ಮ ರಕ್ಷಣೆ ಮಾಡುತ್ತದೆ ಎಂದು ತಿಳಿಸಿದರು.