ಬೆಂಗಳೂರು, ಸೆ 11 (DaijiworldNews/SM): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರ ''ಜನಸ್ಪಂದನ' ಹೆಸರಿನಲ್ಲಿ ಕಾರ್ಯಕ್ರಮವನ್ನು ಮಾಡಿ, ಸುಳ್ಳೇ ನಮ್ಮ ಸ್ಪಂದನೆ- ಜನರಿಗೆ ಟೋಪಿ ಹೊಲಿಯುವುದೇ ನಮ್ಮ ಸಾಧನೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಟೀಕಿಸಿರುವ ಸಿದ್ದರಾಮಯ್ಯ, ವೇದಿಕೆ ಮೇಲಿದ್ದವರು ಕಾರ್ಯಕ್ರಮದ ಉದ್ದಕ್ಕೂ ಸುಳ್ಳುಗಳನ್ನು ಹೇಳಿದ್ದಾರೆ. ಬಿಜೆಪಿಯವರ ಸುಳ್ಳು ಮಾತುಗಳನ್ನು ಕೇಳಿ ಕುರ್ಚಿಗಳನ್ನು ಅರ್ಧಂಬರ್ಧ ಭರ್ತಿ ಮಾಡಿದ್ದ ಜನರು ಬೇಸರದಿಂದ ಎದ್ದು ಹೊರ ನಡೆದದ್ದು ಕಾಣುತ್ತಿತ್ತು. ಆದರೂ ಸುಳ್ಳು ನಿಲ್ಲಲಿಲ್ಲ. ಬಸವರಾಜ ಬೊಮ್ಮಾಯಿಯವರು ತಾವೊಬ್ಬ ಮರ್ಯಾದಸ್ತರ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ, ಈ ರಾಜ್ಯವು ನೈತಿಕತೆಯನ್ನು ಬಯಸುತ್ತದೆ ಎಂಬುದನ್ನು ಪಕ್ಕಕ್ಕೆ ಇಟ್ಟು ಸುಳ್ಳುಗಳನ್ನು ಪುಂಖಾನುಪುಂಖವಾಗಿ ಗಾಳಿಯಲ್ಲಿ ತೇಲಿಬಿಟ್ಟರು. ಅವುಗಳಲ್ಲಿ ಎರಡು ಸುಳ್ಳುಗಳಿಗೆ ನಾನು ಪ್ರತಿಕ್ರಿಯಿಸುತ್ತೇನೆ. ಉಳಿದ ಸುಳ್ಳುಗಳು ಪ್ರತಿಕ್ರಿಯೆಗೂ ಅರ್ಹವಲ್ಲ.
1 ರಾಜ್ಯದಲ್ಲಿ ಐ.ಎ.ಎಸ್.ಅಧಿಕಾರಿಯಾಗಿದ್ದ ಅನುರಾಗ್ ತಿವಾರಿಯವರ ಸಾವು ಯಾರದೋ ಪಿತೂರಿಯಿಂದ ನಡೆದಿದೆ. ಅವರು ಯಾವುದೋ ಹಗರಣವನ್ನು ತನಿಖೆ ಮಾಡುತ್ತಿದ್ದರು ಅದಕ್ಕಾಗಿ ಕೊಲೆ ನಡೆದಿದೆ ಇತ್ಯಾದಿಯಾಗಿ ಹೇಳಿದ್ದಾರೆ. ಬಸವರಾಜ ಬೊಮ್ಮಾಯಿಯವರು ತಾನೊಬ್ಬ ಮುಖ್ಯಮಂತ್ರಿ, ತಾನು ಆಡುವ ಪ್ರತಿ ಮಾತಿಗೊಂದು ಘನತೆ ಇರಬೇಕು ಎಂಬುದನ್ನು ಕಾಲ ಕೆಳಗೆ ತುಳಿದು ಈ ಮಾತನ್ನು ಹೇಳಿದ್ದಾರೆ. ಅನುರಾಗ್ ತಿವಾರಿಯವರು ಉತ್ತರ ಪ್ರದೇಶದ ಲಖ್ನೊದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಕುರಿತು ಉತ್ತರ ಪ್ರದೇಶದ ವಿಶೇಷ ತನಿಖಾ ದಳ ತನಿಖೆಗೆ ತೆಗೆದುಕೊಂಡಿತ್ತು. ಶೋಭಾ ಕರಂದ್ಲಾಜೆ ಯವರು ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಬೇಕೆಂದು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರಿಗೆ ಫೋನ್ ಕರೆ ಮಾಡಿದ್ದರು. ಶೋಭಾ ಕರಂದ್ಲಾಜೆಯವರ ಮನವಿ ಆಧರಿಸಿ ಅವರು ಈ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಿದ್ದಾರೆ. 2018 ರಲ್ಲಿ ಸಿ.ಬಿ.ಐ.ರಾಜ್ಯದಿಂದಲೂ ಮಾಹಿತಿ ಸಂಗ್ರಹಿಸಿದೆ. ಬಹುಶಃ ಅದು ರಾಜ್ಯಕ್ಕೂ ಬಂದು ಪರಿಶೀಲನೆ ನಡೆಸಿದೆ. ಪ್ರಕರಣವನ್ನು ಸಿ.ಬಿ.ಐ. ಗೆ ವಹಿಸಿ, 4 ವರ್ಷಗಳಾಗಿವೆ. ತನಿಖೆಯ ಫಲಿತಾಂಶಗಳೇನು ಎಂದು ಈ ವರೆಗೆ ಮಾಹಿತಿ ಇಲ್ಲ.