ನವದೆಹಲಿ, ಸೆ 11 (DaijiworldNews/DB): ದೆಹಲಿಯಲ್ಲಿ ಲೋಫ್ಲೋರ್ ಬಸ್ಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು, ಈ ಸಂಬಂಧ ತನಿಖೆ ನಡೆಸಬೇಕೆಂದು ಸಿಬಿಐಗೆ ದೂರು ನೀಡಿದ್ದಾರೆ. ಮದ್ಯ ಹಗರಣ ವಿಚಾರದಲ್ಲಿ ವಿವಾದಕ್ಕೆ ಸಿಲುಕಿದ್ದ ದೆಹಲಿಯ ಆಮ್ ಆದ್ಮಿ ಸರ್ಕಾರಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ದೆಹಲಿ ಸಾರಿಗೆ ನಿಗಮವು ಬಿಎಸ್-IV ಮತ್ತು ಬಿಎಸ್-VI ಮಾನದಂಡಗಳ 1,000 ಲೋ ಫ್ಲೋರ್ ಬಸ್ಗಳ ಖರೀದಿಗಾಗಿ ಒಪ್ಪಂದ ಮಾಡಿಕೊಂಡಿದೆ. ಆದರೆ ಇದರಲ್ಲಿ ಅವ್ಯವಹಾರ ನಡೆದಿದೆ. ಹೀಗಾಗಿ ಸೂಕ್ತ ತನಿಖೆ ನಡೆಸಬೇಕು ಎಂದವರು ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಸಿಬಿಐ ಪ್ರಾಥಮಿಕ ತನಿಖೆ ಕೈಗೆತ್ತಿಕೊಂಡಿದೆ.
ಆದರೆ ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಎಎಪಿ ಶಾಸಕ ಸೌರಭ್ ಭಾರದ್ವಾಜ್, ಬಸ್ಗಳ ಖರೀದಿ ಇನ್ನೂ ನಡೆದಿಲ್ಲ. ಟೆಂಡರ್ ಪ್ರಕ್ರಿಯೆಯನ್ನು ಕೂಡಾ ರದ್ದುಗೊಳಿಸಲಾಗಿದೆ. ಹಾಗಿದ್ದರೂ ದೂರು ನೀಡಿರುವುದು ಯಾಕೆಂದು ತಿಳಿಯುತ್ತಿಲ್ಕ ಎಂದಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಮೇಲಿರುವ ಭ್ರಷ್ಟಾಚಾರ ಆರೋಪಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಅವರು ಆಪ್ ಸಕಾರದ ಮೇಲೆ ವೃಥಾ ಆರೋಪ ಹೊರಿಸುತ್ತಿದ್ದಾರೆ. ಈಗಾಗಲೇ ಮೂವರು ಸಚಿವರ ವಿರುದ್ಧ ದೂರು ನೀಡಿದರೂ ನಿಷ್ಪ್ರಯೋಜಕವಾಗಿದೆ. ಈಗ ಮತ್ತೆ ಆರೋಪ ಹೊರಿಸುತ್ತಿದ್ದಾರೆ ಎಂದವರು ಕಿಡಿ ಕಾರಿದ್ದಾರೆ.