ಚೈನ್ನೈ, ಸೆ 11 (DaijiworldNews/DB): ವರನಿಗೆ ವಿವಾಹಾನಂತರವೂ ಕ್ರಿಕೆಟ್ ಆಡಲು ಅವಕಾಶ ಕಲ್ಪಿಸಬೇಕು ಎಂದು ವರನ ಸ್ನೇಹಿತರು ವಧುವಿನಿಂದ ಬಾಂಡ್ ಪೇಪರ್ಗೆ ಸಹಿ ಹಾಕಿಸಿಕೊಂಡ ಸ್ವಾರಸ್ಯಕರ ಘಟನೆ ಚೆನ್ನೈನ ಮಧುರೈನಲ್ಲಿ ನಡೆದಿದೆ.
ಥೇಣಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಮಧುರೈ ಜಿಲ್ಲೆಯ ಉಸಿಲಂಪಟ್ಟಿಯ ಕೀಲಾ ಪುದೂರು ನಿವಾಸಿ ಹರಿಪ್ರಸಾದ್ ಅವರ ವಿವಾಹವು ತೇಣಿ ನಿವಾಸಿ ಪೂಜಾ ಎಂಬಾಕೆಯೊಂದಿಗೆ ಸೆಪ್ಟಂಬರ್ 9ರಂದು ನಡೆದಿತ್ತು ಉತ್ತಮ ಕ್ರಿಕೆಟ್ ಪಟುವಾಗಿರುವ ಹರಿಪ್ರಸಾದ್ ಸ್ಥಳೀಯ ಸೂಪರ್ ಸ್ಟಾರ್ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಮದುವೆಯ ನಂತರ ಪುರುಷರಿಗೆ ಕ್ರೀಡೆ ಸೇರಿದಂತೆ ಇತರ ಮೋಜಿನ ಸಂದರ್ಭಗಳು ಮರೆಯಾಗುತ್ತವೆ ಎಂದು ವರನ ಸ್ನೇಹಿತರು ವಧುವಿನಿಂದ ಬಾಂಡ್ ಪೇಪರ್ ಗೆ ಸಹಿ ಹಾಕಿಸಿದ್ದಾರೆ. ಮದುವೆಯ ನಂತರವೂ ಪ್ರತಿ ಶನಿವಾರ ಮತ್ತು ಭಾನುವಾರ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಅವಕಾಶ ನೀಡುತ್ತೇನೆ ಎಂದು ಬರೆದಿದ್ದ ಬಾಂಡ್ ಪೇಪರ್ಗೆ ವಧು ಪೂಜಾ ಸಹಿ ಹಾಕಿದ್ದಾರೆ.
ಸದ್ಯ ವಧು ಸಹಿ ಹಾಕಿರುವ ಈ ಬಾಂಡ್ ಪೇಪರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವರನ ಸ್ನೇಹಿತರ ಸ್ವಾರಸ್ಯಕ್ಕೆ ನೆಟ್ಟಿಗರು ಕೂಡಾ ಬೆಂಬಲಿಸಿದ್ದಾರೆ.