ತಮಿಳುನಾಡು, ಸೆ 11 (DaijiworldNews/DB): ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ತಮಿಳುನಾಡಿನಲ್ಲಿ ನಡೆಸುತ್ತಿದ್ದ ಸಂವಾದದ ವೇಳೆ ನಡೆದ ತಮಾಷೆಯ ಪ್ರಸಂಗವೊಂದನ್ನು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರು ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮಾರ್ತಾಂಡಮ್ನಲ್ಲಿ ಮಹಿಳಾ ಎಂಜಿಎನ್ಆರ್ಇಜಿಎ ಕಾರ್ಯಕರ್ತರೊಂದಿಗೆ ರಾಹುಲ್ ಗಾಂಧಿಯವರು ಸಂವಾದ ನಡೆಸುತ್ತಿದ್ದ ವೇಳೆ ಮಹಿಳೆಯೊಬ್ಬರು ಮಾತನಾಡುತ್ತಾ, ರಾಹುಲ್ ಗಾಂಧಿಯವರು ತಮಿಳುನಾಡನ್ನು ಪ್ರೀತಿಸುತ್ತಾರೆ ಮತ್ತು ಅವರು ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ದರಾಗಿದ್ದಾರೆ ಎಂದಿದ್ದಾರೆ. ಇದನ್ನು ಸಂಸದ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, 3ನೇ ದಿನದ ಯಾತ್ರೆಯಲ್ಲಿ ಇದೊಂದು ಉಲ್ಲಾಸದಾಯಕ ಕ್ಷಣ. ತಮಿಳುನಾಡನ್ನು ರಾಹುಲ್ ಗಾಂಧಿಯವರು ಪ್ರೀತಿಸುತ್ತಾರೆ. ಅವರು ತಮಿಳುನಾಡಿನ ಹುಡುಗಿಯನ್ನು ಮದುವೆಯಾಗಲು ಸಿದ್ದರಾಗಿದ್ದಾರೆ ಎಂದು ಮಹಿಳೆಯೊಬ್ಬರು ಸಂವಾದದ ವೇಳೆ ಹೇಳಿದರು ಎಂದು ಬರೆದುಕೊಂಡಿದ್ದಾರೆ.
ಮಹಿಳೆಯ ಮಾತಿಗೆ ರಾಹುಲ್ ಗಾಂಧಿಯವರು ನಕ್ಕರು. ಅವರ ಮುಖದಲ್ಲಿ ಆ ನಗು ವ್ಯಕ್ತವಾಗಿರುವುದನ್ನು ನೀವು ಕಾಣಬಹುದು ಎಂದು ಚಿತ್ರ ಸಮೇತ ಜೈರಾಮ್ ರಮೇಶ್ ಹಂಚಿಕೊಂಡಿದ್ದಾರೆ.
ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಪ್ರತಿಭಟನೆ ಸಲುವಾಗಿ 150 ದಿನಗಳ ಸುದೀರ್ಘ 'ಭಾರತ್ ಜೋಡೋ' ಯಾತ್ರೆಯನ್ನು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದು, ಇಂದು ತಮಿಳುನಾಡಿನಲ್ಲಿ 3ನೇ ದಿನದ ಯಾತ್ರೆ ನಡೆಯಿತು.