ಮಹಾರಾಷ್ಟ್ರ, ಸೆ 11 (DaijiworldNews/DB): ಕೋವಿಶೀಲ್ಡ್ ಲಸಿಕೆ ಪೂರೈಸುವ ಪುಣೆಯ ಸೀರಮ್ ಸಂಸ್ಥೆಯ ಮುಖ್ಯಸ್ಥ, ಸಿಇಒ ಆದಾರ್ ಪೂನಾವಾಲಾ ಅವರ ಮೊಬೈಲ್ ಸಂಖ್ಯೆಯಿಂದ ನಕಲಿ ಸಂದೇಶ ಕಳುಹಿಸಿ ಆನ್ ಲೈನ್ ವಂಚಕರು 1 ಕೋಟಿ ರೂ.ಗಳಿಗೂ ಅಧಿಕ ಹಣ ವಂಚಿಸಿರುವ ಪ್ರಕರಣ ನಡೆದಿದೆ.
ಬಂಡಗಾರ್ಡನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸಂಸ್ಥೆಯ ನಿರ್ದೇಶಕರಾಗಿರುವ ಸತೀಶ್ ದೇಶಪಾಂಡೆ ಅವರ ಮೊಬೈಲ್ಗೆ ಕಂಪನಿ ಸಿಇಒ ಪೂನಾವಾಲಾ ಅವರ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಸಂದೇಶ ಬಂದಿತ್ತು. ಅದರಲ್ಲಿ ಕೆಲವು ಬ್ಯಾಂಕ್ ಖಾತಾ ಸಂಖ್ಯೆಗಳನ್ನು ನೀಡಲಾಗಿದ್ದು, ತತ್ಕ್ಷಣ ಹಣ ಕಳುಹಿಸುವಂತೆ ಕೋರಲಾಗಿತ್ತು. ಸಿಇಒ ಅವರೇ ಸಂದೇಶ ಕಳುಹಿಸಿದ್ದಾರೆಂದು ನಂಬಿದ ದೇಶಪಾಂಡೆ ಅವರು ಸಾಗರ ಕಿತ್ತೂರ ಎಂಬುವವರಿಗೆ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಕಳುಹಿಸಿ ಹಣ ಜಮೆ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಕಿತ್ತೂರ ಅವರು 1,01,01,554 ರೂ.ಗಳನ್ನು ಜಮೆ ಮಾಡಿದ್ದಾರೆ.
ಸೆಪ್ಟೆಂಬರ್ 7ರಿಂದ 8ರ ನಡುವೆ ಆನ್ಲೈನ್ ಮೂಲಕ ಇಷ್ಟು ಹಣ ಜಮೆಯಾಗಿದೆ. ಬಳಿಕ ಈ ವಿಚಾರವನ್ನು ಕಂಪೆನಿಯಲ್ಲಿ ಚರ್ಚಿಸಿದಾಗ ಪೂನಾವಾಲ ಅವರು ಯಾವುದೇ ಸಂದೇಶ ಕಳುಹಿಸದಿರುವ ಬಗ್ಗೆ ತಿಳಿದು ಬಂದಿದೆ. ಕೂಡಲೇ ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.