ತೆಲಂಗಾಣ, ಸೆ 11 (DaijiworldNews/DB): ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಗಣೇಶೋತ್ಸವ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಮೈಕ್ ಕಿತ್ತೆಸೆದ ಘಟನೆಗೆ ಸಂಭವಿಸಿದಂತೆ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ನಾಯಕ ನಂದ ಕಿಶೋರ್ ವ್ಯಾಸ್ ವಿರುದ್ಧ ಪ್ರಕರಣ ದಾಖಲಾಗಿದೆ.
ತೆಲಂಗಾಣದ ಹೈದರಾಬಾದ್ನಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶುಕ್ರವಾರ ಗಣೇಶೋತ್ಸವ ರ್ಯಾಲಿಯನ್ನುದೇಶಿಸಿ ಮಾತನಾಡುತ್ತಿದ್ದ ವೇಳೆ ನಂದ ಕಿಶೋರ್ ವ್ಯಾಸ್ ವೇದಿಕೆ ಏರಿ ಕೆಸಿಆರ್ ವಿರುದ್ದ ಮಾತನಾಡುವುದು ಸಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಮೈಕ್ ಕಿತ್ತೆಸೆದಿದ್ದರು. ಈ ಸಂಬಂಧ ಇದೀಗ ಅವರ ವಿರುದ್ದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354, 341 ಮತ್ತು 506 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಹಿಮಂತ ಬಿಸ್ವಾ ಶರ್ಮಾ, ಇದು ಪೂರ್ವ ನಿಯೋಜಿತ ಘಟನೆಯಾಗಿದೆ. ನಾನು ಇನ್ನೂ ಮಾತನಾಡಲು ಪ್ರಾರಂಭಿಸಿಲ್ಲ. ಅಷ್ಟರಲ್ಲಾಗಲೇ ಟಿಆರ್ಎಸ್ ಬೆಂಬಲಿಗನೊಬ್ಬ ವೇದಿಕೆಯೇರಿ ಬಂದು ಕೆಸಿಆರ್ ವಿರುದ್ದ ಮಾತನಾಡಿರುವುದೇಕೆ ಎಂದು ಪ್ರಶ್ನಿಸಿದರು. ಬಳಿಕ ಜನ ಅವರನ್ನು ದೂರ ತಳ್ಳಿದರು. ಆದರೆ ಅವರು ಮೈಕ್ ಕಿತ್ತೆಸೆದಿದ್ದಾರೆ ಎಂದು ತಿಳಿಸಿದ್ದಾರೆ.