ನವದೆಹಲಿ, ಸೆ 11 (DaijiworldNews/HR): ಸೆಪ್ಟೆಂಬರ್ 8ರಂದು ನಿಧನರಾದ ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರ ಗೌರವಾರ್ಥವಾಗಿ ದೇಶದಲ್ಲಿ ಭಾನುವಾರ ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗುತ್ತಿದ್ದು, ಕೆಂಪು ಕೋಟೆ ಮತ್ತು ರಾಷ್ಟ್ರಪತಿ ಭವನ ಸೇರಿದಂತೆ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ.
ಶೋಕಾಚರಣೆಯ ದಿನದಂದು ರಾಷ್ಟ್ರಧ್ವಜವನ್ನು ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ದೇಶದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ. ಇದೇ ವೇಳೆ ಯಾವುದೇ ಅಧಿಕೃತ ಮನರಂಜನೆ ಇರುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಏಳು ದಶಕಗಳ ಕಾಲ ಬ್ರಿಟನ್ ರಾಣಿಯಾಗಿದ್ದ ಎರಡನೇ ಎಲಿಜಬೆತ್, ಅತ್ಯಂತ ಸುದೀರ್ಘ ಅವಧಿಯವರೆಗೂ ದೇಶವನ್ನು ಆಳಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.
ಇನ್ನು ರಾಣಿಯ ಅಂತ್ಯಕ್ರಿಯೆಯು ಆಕೆಯ ಮರಣದ 10 ದಿನಗಳ ನಂತರ ನಡೆಯಲಿದ್ದು, ಅವರ ಮರಣದ ಐದು ದಿನಗಳ ನಂತರ ಅವರ ಶವಪೆಟ್ಟಿಗೆಯನ್ನು ಲಂಡನ್ನಿಂದ ಬಕಿಂಗ್ಹ್ಯಾಮ್ ಅರಮನೆಗೆ ವೆಸ್ಟ್ಮಿನಿಸ್ಟರ್ ಅರಮನೆಗೆ ವಿದ್ಯುಕ್ತ ಮಾರ್ಗದ ಮೂಲಕ ಒಯ್ಯಲಾಗುತ್ತದೆ.