ಲಕ್ನೋ, ಸೆ 11 (DaijiworldNews/DB): ಲಕ್ನೋದ ಲೆವನಾ ಹೋಟೆಲ್ನಲ್ಲಿ ಅಗ್ನಿ ದುರಂತ ಸಂಭವಿಸಿ ನಾಲ್ವರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪದ ಮೇಲೆ 15 ಮಂದಿ ಅಧಿಕಾರಿಗಳನ್ನು ಉತ್ತರ ಪ್ರದೇಶ ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದೇಶದ ಮೇರೆಗೆ ಐದು ಸರ್ಕಾರಿ ಇಲಾಖೆಗಳ ಒಟ್ಟು 15 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಗೃಹ ಇಲಾಖೆ, ಇಂಧನ ಇಲಾಖೆ, ನೇಮಕಾತಿ ಇಲಾಖೆ, ಲಖನೌ ಅಭಿವೃದ್ಧಿ ಪ್ರಾಧಿಕಾರ (ಎಲ್ಡಿಎ) ಮತ್ತು ಅಬಕಾರಿ ಇಲಾಖೆಯಲ್ಲಿರುವ ಕೆಲ ಅಧಿಕಾರಿಗಳೂ ಅಮಾನತುಗೊಂಡವರಲ್ಲಿ ಸೇರಿದ್ದಾರೆ. ಅಲ್ಲದೆ ನಾಲ್ವರು ನಿವೃತ್ತ ಅಧಿಕಾರಿಗಳ ವಿರುದ್ದವೂ ಕ್ರಮಕ್ಕೆ ಆದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ವರದಿ ನೀಡಲು ಲಕ್ನೋ ಪೊಲೀಸ್ ಕಮಿಷನರ್ ಎಸ್ ಬಿ. ಶಿರಾಡ್ಕರ್ ಮತ್ತು ಕಮಿಷನರ್ (ಲಕ್ನೋ ವಿಭಾಗ) ರೋಷನ್ ಜೇಕಬ್ ಅವರನ್ನೊಳಗೊಂಡ ದ್ವಿಸದಸ್ಯ ತನಿಖಾ ಸಮಿತಿಗೆ ಸೂಚಿಸಲಾಗಿತ್ತು. ಇದೀಗ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ್ದು, ಘಟನೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದಾರೆ.
ಲಕ್ನೋದ ಹಜರತ್ಗಂಜ್ ಪ್ರದೇಶದ ಲೆವಾನಾ ಹೋಟೆಲ್ನಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ನಾಲ್ವರು ಮೃತಪಟ್ಟು, 10 ಮಂದಿ ಗಾಯಗೊಂಡಿದ್ದರು.