ನವದೆಹಲಿ, ಸೆ 11 (DaijiworldNews/DB): 5.38 ಕೋಟಿ ರೂ. ಮೌಲ್ಯದ 12 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಅಧಿಕಾರಿಗಳು ವಿದೇಶಿ ಪ್ರಜೆ ಸಹಿತ ಆರು ಮಂದಿಯನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಂಧಿಸಿದ್ದಾರೆ.
ಬಂಧಿತರಲ್ಲಿ ಓರ್ವ ಸುಡಾನ್ ಪ್ರಜೆ ಸಹ ಇದ್ದಾನೆ. ವಿಶೇಷ ವಿನ್ಯಾಸದ ಬೆಲ್ಟ್ ಮೂಲಕ ಈತ ಚಿನ್ನ ಕಳ್ಳಸಾಗಾಣೆ ಮಾಡುತ್ತಿದ್ದ. ಈತ ತಪ್ಪಿಸಿಕೊಳ್ಳಲು ಸಹಾಯವಾಗಲು ಇತರ ಪ್ರಯಾಣಿಕರು ಗಲಾಟೆ ಎಬ್ಬಿಸಿದ್ದಾರೆ. ಹೀಗಾಗಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಸ್ಟಮ್ಸ್ ಕಾಯ್ದೆ ಸೆಕ್ಷನ್ 110ರ ಅಡಿಯಲ್ಲಿ ಚಿನ್ನ ಕಳ್ಳ ಸಾಗಣೆ ಪ್ರಕರಣ ದಾಖಲಿಸಲಾಗಿದೆ.