ಸೂರತ್, ಸೆ 11 (DaijiworldNews/DB): ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕಾರ್ಮಿಕನೊಬ್ಬ ಮೃತಪಟ್ಟು , 20 ಮಂದಿ ಗಾಯಗೊಂಡ ಘಟನೆ ಗುಜರಾತ್ನ ಸೂರತ್ ನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಮೂವರು ನಾಪತ್ತೆಯಾಗಿದ್ದಾರೆ. ಗುಜರಾತ್ ಕೈಗಾರಿಕ ಅಭಿವೃದ್ಧಿ ಮಂಡಳಿ (ಜಿಐಡಿಸಿ) ಪ್ರದೇಶದಲ್ಲಿರುವ ಅನುಪಮ್ ರಸಾಯನ್ ಇಂಡಿಯಾ ಕಾರ್ಖಾನೆಯಲ್ಲಿ ಶನಿವಾರ ರಾತ್ರಿ 10.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಕಾರ್ಖಾನೆಯಾದ್ಯಂತ ಬೆಂಕಿ ಹರಡಿದೆ. ರಾಸಾಯನಿಕ ಕಂಟೇನರ್ ಸ್ಫೋಟಗೊಂಡಿದೆ ಎಂದು ಸೂರತ್ನ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸಂತ್ ಪರೀಕ್ ತಿಳಿಸಿದ್ದಾರೆ.
ಮೃತದೇಹವನ್ನು ತಡರಾತ್ರಿ ಹೊರತೆಗೆಯಲಾಗಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಹದಿನೈದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಮುಂಜಾನೆ ವೇಳೆಗೆ ಬೆಂಕಿ ನಂದಿಸಲಾಗಿದೆ. ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.