ನವದೆಹಲಿ, ಸೆ 11 (DaijiworldNews/DB): ಅಗ್ನಿಪಥ್ ಯೋಜನೆಯ ರಹಸ್ಯ ಫೈಲ್ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಸೇನಾ ನೇಮಕಾತಿಯ ಅಗ್ನಿಪಥ್ ಯೋಜನೆ ಒದಗಿಸುವಂತೆ ಕೋರಿ ಪುಣೆ ಮೂಲದ ಆರ್ಟಿಐ ಕಾರ್ಯಕರ್ತ ವಿಹಾರ್ ದುರ್ವೆ ಸಲ್ಲಿಸಿರುವ ಮಾಹಿತಿ ಹಕ್ಕು ಅರ್ಜಿಗೆ ಸ್ಪಂದಿಸಲು ನಿರಾಕರಿಸಿರುವ ರಕ್ಷಣಾ ಸಚಿವಾಲಯವು, ಅಗ್ನಿಪಥ್ ಫೈಲ್ನ್ನು ರಹಸ್ಯ ಎಂದು ಗುರುತಿಸಲಾಗಿದೆ. ಇದು ಪಾರದರ್ಶಕ ಕಾನೂನಿನ ಸೆಕ್ಷನ್ 8 ಮತ್ತು 9 ರ ಅಡಿಯಲ್ಲಿ ಇಲ್ಲ. ಹೀಗಾಗಿ ಮಾಹಿತಿ ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಅಗ್ನಿಪಥ್ ಯೋಜನೆಯಡಿ ನೇಮಕಗೊಳ್ಳುವವರಿಗೆ ವೇತನ ಪ್ಯಾಕೇಜ್, ಭತ್ಯೆಗಳ ಕುರಿತು ಮಾಹಿತಿ ಕೇಳಲಾಗಿತ್ತು. ಇದಲ್ಲದೆ ಯೋಜನೆಯ ವಿವಿಧ ವಿಚಾರಗಳ ಮಾಹಿತಿಗಾಗಿ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಗೆ ಮಾಹಿತಿ ನೀಡಲು ಮಿಲಿಟರಿ ವ್ಯವಹಾರಗಳ ಇಲಾಖೆಯ ಮಾಹಿತಿ ಅಧಿಕಾರಿ ನಿರಾಕರಿಸಿದ್ದಾರೆ.
ಮಾಹಿತಿ ನಿರಾಕರಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಟಿಐ ಕಾರ್ಯಕರ್ತ ವಿಹಾರ್ ದುರ್ವೆ, ರಹಸ್ಯ ಎಂದು ಗುರುತಿಸಿರುವ ಫೈಲ್ ಮಾಹಿತಿ ನಿರಾಕರಣೆ ಸರಿಯಲ್ಲ ಎಂದಿದ್ದಾರೆ. ಅಲ್ಲದೆ, ಒಟ್ಟು ಎರಡು ಬಾರಿ ಮನವಿ ಮಾಡಲಾಗಿದ್ದು, ನಿರಾಕರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿ ಅಭಿಮಾನ್ ಸಾಹೂ ಅವರಿಗೆ ದುರ್ವೆ ಮೇಲ್ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಾಹೂ, ಮಾಹಿತಿಯನ್ನು ಸರಿಯಾಗಿಯೇ ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ.