ನವದೆಹಲಿ, ಸೆ 11 (DaijiworldNews/DB): ಬಿಹಾರ ಸಿಎಂ ನಿತೀಶ್ಕುಮಾರ್ ಅವರು ವಿವಿಧ ವಿಪಕ್ಷಗಳ ನಾಯಕರನ್ನು ಭೇಟಿಯಾಗುವುದರಿಂದ ಚುನಾವಣೆ ದೃಷ್ಟಿಯಲ್ಲಿ ಯಾವುದೇ ಲಾಭವಿಲ್ಲ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಬಿಜೆಪಿ ಮೈತ್ರಿ ಮುರಿದುಕೊಂಡ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳೆದ ಕೆಲವು ದಿನಗಳಿಂದ ವಿಪಕ್ಷದವರನ್ನು ಭೇಟಿಯಾಗುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ವಿಶ್ವಾಸಾರ್ಹ ಮುಖ ಮತ್ತು ಸಾಮುಹಿಕ ಚಳುವಳಿಗಳಿಂದಷ್ಟೇ ಜನರ ಬಳಿ ತೆರಳಲು ಸಾಧ್ಯ. ರಾಜಕೀಯ ಪಕ್ಷದವರನ್ನು ಭೇಟಿ ಮಾಡುವುದರಿಂದ ಪ್ರಯೋಜನವಾಗದು ಎಂದರು.
ಸಭೆ, ಚರ್ಚೆಗಳನ್ನು ನಡೆಸುವುದರಿಂದ ರಾಜಕೀಯದ ವಸ್ತುಸ್ಥಿತಿ ಬದಲಾಗುವುದಿಲ್ಲ. ನಿತೀಶ್ಕುಮಾರ್ ಅನುಭವಿ ರಾಜಕಾರಣಿ. ಸಾಮೂಹಿಕ ಭೇಟಿ, ಚರ್ಚೆಗಳು ರಾಜಕೀಯದಲ್ಲಿ ಬೆಳೆಯುವುದಕ್ಕೆ ಬೇಕಾದ ಮಾರ್ಗಗಳಲ್ಲ ಎಂದವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು.
ಬಿಜೆಪಿ ಸಖ್ಯದಲ್ಲಿದ್ದಾಗ ಆ ಪಕ್ಷದ ನಾಯಕರನ್ನೇ ಭೇಟಿಯಾಗುತ್ತಿದ್ದ ನಿತೀಶ್ಕುಮಾರ್ ಸಖ್ಯ ತೊರೆದ ಬಳಿಕ ವಿಪಕ್ಷಗಳ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ. ವಿಶ್ವಾಸಾರ್ಹ ಮುಖ ಇದ್ದರಷ್ಟೇ ರಾಜಕೀಯ ರಂಗದಲ್ಲಿ ಗೆಲುವು ಸಾಧ್ಯ ಎಂದರು.