ಮುನ್ನಾರ್, ಸೆ 11 (DaijiworldNews/DB): ವ್ಯಕ್ತಿಯೊಬ್ಬ ಬೆಕ್ಕಿನ ಮರಿಗೆ ಹುಲಿಯ ಬಣ್ಣ ಬಳಿದು 25 ಲಕ್ಷ ರೂ.ಗಳಿಗೆ ಮಾರಾಟ ಮಾಡಲು ಯತ್ನಿಸಿದ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಗಡಿ ಗ್ರಾಮ ತಿರುವಣ್ಣಾಮಲ ಅರಣಿ ನಿವಾಸಿ ಪಾರ್ತಿಬನ್ (24) ಬಂಧಿತ ಆರೋಪಿ. ಮೂರು ತಿಂಗಳ ಮೂರು ಹುಲಿ ಮರಿಗಳು ಮಾರಾಟಕ್ಕಿವೆಯೆಂದು ವಾಟ್ಸಾಪ್ನಲ್ಲಿ ಪ್ರಚಾರ ಮಾಡಿದ್ದ ಈತ 25 ಲಕ್ಷ ರೂ. ಬೆಲೆಯನ್ನೂ ಹೇಳಿದ್ದ. ಅಲ್ಲದೆ, ಖರೀದಿಸುವವರಿಗೆ ಹತ್ತು ದಿನದೊಳಗೆ ಮರಿಗಳನ್ನು ಪಾವತಿಸುವುದಾಗಿಯೂ ಪೋಸ್ಟ್ ಮಾಡಿದ್ದಾನೆ. ಅಲ್ಲದೆ ಹುಲಿ ಮರಿಗಳಿಗೆ ಸ್ಟೀಲ್ ಬೌಲ್ನಲ್ಲಿ ಆಹಾರ ನೀಡುತ್ತಿರುವ ಫೋಟೋವನ್ನು ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದಾನೆ.
ಈ ವಿಚಾರ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಕೂಡಲೇ ತನಿಖೆ ಆರಂಭಿಸಿದ್ದಾರೆ. ಈ ವಿಷಯ ಗೊತ್ತಾದ ಕೂಡಲೇ ಪಾರ್ಥಿಬನ್ ತಲೆಮರೆಸಿಕೊಂಡಿದ್ದ. ಅಧಿಕಾರಿಗಳು ಆತನ ಮನೆಗೆ ಬಂದು ಪರಿಶೀಲಿಸಿದಾಗ ಹುಲಿ ಮರಿಗಳು ಕಂಡು ಬಂದಿಲ್ಲ. ಬಳಿಕ ಪೊಲೀಸರ ಸಹಕಾರದೊಂದಿಗೆ ಹುಡುಕಾಡಿದಾಗ ಆರೋಪಿ ಪತ್ತೆಯಾಗಿದ್ದಾನೆ. ಆತನನ್ನು ಪೊಲೀಸರು ವಶಪಡಿಸಿಕೊಂಡರು.
ವಿಚಾರಣೆ ವೇಳೆ ಅಂಬತ್ತೂರಿನ ಈತನ ಸ್ನೇಹಿತ ಹುಲಿ ಮರಿ ಚಿತ್ರಗಳನ್ನು ವಾಟ್ಸಾಪ್ನಲ್ಲಿ ಹಾಕುವಂತೆ ಫೋಟೋಗಳನ್ನು ನೀಡಿದ್ದ ಎಂದು ಆರೋಪಿ ಹೇಳಿಕೊಂಡಿದ್ದಾನೆ. ಬೆಕ್ಕಿನ ಮರಿಗಳಿಗೆ ಹುಲಿ ಬಣ್ಣ ಬಳಿದು ಅವುಗಳನ್ನು ಹುಲಿಮರಿಗಳನ್ನಾಗಿ ತೋರ್ಪಡಿಸುವ ಉದ್ದೇಶ ಅವರದ್ದಾಗಿತ್ತು ಎನ್ನಲಾಗಿದೆ.