ತಿರುವನಂತಪುರ, ಸೆ 10 (DaijiworldNews/DB): ಎಲೆಕ್ಟ್ರಿಕ್ ವಾಹನಕ್ಕೆ ವಾಯು ಮಾಲಿನ್ಯ ಪ್ರಮಾಣ ಪತ್ರ ನೀಡಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬನಿಗೆ ಪೊಲೀಸರು ದಂಡ ಹಾಕಿದ ಘಟನೆ ಕೇರಳದಲ್ಲಿ ನಡೆದಿದೆ.
ಅಸಲಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರ ಅಗತ್ಯ ಇರುವುದಿಲ್ಲ. ಯುವಕ ಏಥರ್ ಕಂಪೆನಿಯ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಮಣಪುರಂನ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ತಡೆದು ನಿಲ್ಲಿಸಿದ ಪೊಲೀಸರು ಪರಿಶೀಲನೆ ನಡೆಸಿ 250 ರೂ. ದಂಡ ವಿಧಿಸಿದ್ದಾರೆ. ಇದರಿಂದ ಯುವಕ ತಬ್ಬಿಬ್ಬಾಗಿದ್ದಾನೆ. ಮನೆಗೆ ಬಂದು ನೋಡಿದ ಬಳಿಕ ಆತನಿಗೂ ಪ್ರಮಾದ ಗೊತ್ತಾಗಿದೆ. ಬಳಿಕ ಯುವಕ ರಶೀದಿಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಟ್ಯಾಗ್ ಮಾಡಿ ಎಲೆಕ್ಟ್ರಿಕ್ ವಾಹನಗಳಿಗೂ ಪಿಯುಸಿ ಪ್ರಮಾಣಪತ್ರ ಕಡ್ಡಾಯಗೊಳಿಸಿದ್ದೀರಾ? ಎಂದು ಪ್ರಶ್ನಿಸಿದ್ದಾನೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದ್ದು, ನೆಟ್ಟಿಗರು ಕೇರಳ ಟ್ರಾಫಿಕ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಈ ಕುರಿತು ಸ್ಪಷ್ಟನೆ ನೀಡಿರುವ ಮಣಪ್ಪುರಂ ಜಿಲ್ಲೆಯ ಪೊಲೀಸರು ಸಿಬಂದಿಯ ಅಚಾತುರ್ಯದಿಂದ ಈ ಘಟನೆ ನಡೆದಿದೆ. ಯುವಕನೊಂದಿಗೆ ಡಿಎಲ್ ತೋರಿಸುವುದಕ್ಕೆ ಹೇಳಿದಾಗ ಅವರ ಬಳಿ ಡಿಎಲ್ ಇರಲಿಲ್ಲ. ಇದಕ್ಕಾಗಿ ದಂಡ ವಿಧಿಸಲಾಗಿತ್ತು. ಆದರೆ ಮೆಷಿನ್ನಲ್ಲಿ ಎಡವಟ್ಟಾಗಿ ತಪ್ಪಾಗಿ ಮುದ್ರಿಸಲ್ಪಟ್ಟಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.