ಕೊಲ್ಕತ್ತಾ, ಸೆ 10 (DaijiworldNews/DB): ಬಿಜೆಪಿಯವರು ಗೆರೆ ದಾಟಬಾರದು. ಪ್ರತಿಪಕ್ಷಗಳ ಸದಸ್ಯರ ವೈಯಕ್ತಿಕ ಬಟ್ಟೆ, ವಸ್ತುಗಳ ಬಗ್ಗೆ ಟೀಕೆ ಸಲ್ಲದು ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟಿ-ಶರ್ಟ್ ವಿಚಾರವಾಗಿ ಬಿಜೆಪಿ ಟೀಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ಸಂಸದರು ಧರಿಸುವ ಕೈಗಡಿಯಾರ, ಶೂ, ಉಂಗುರ, ಬಟ್ಟೆ, ಪೆನ್ಗಳ ಬಗ್ಗೆ ಟೀಕೆ ಮಾಡಲು ನಾವೂ ಪ್ರಾರಂಭಿಸಬಹುದು. ಆದರೆ ಇದರಲ್ಲಿ ನಾಶವಾಗುವುದು ನೀವೇ ಎಂದು ಅವರು ತಾಕೀತು ಮಾಡಿದ್ದಾರೆ.
ಪ್ರತಿಪಕ್ಷಗಳ ಸದಸ್ಯರ ವೈಯಕ್ತಿ ಬಟ್ಟೆ, ವಸ್ತುಗಳ ಕುರಿತು ಟೀಕೆ ಮಾಡುವುದು ಸರಿಯಲ್ಲ. ಬಿಜೆಪಿ ಕೂಡಲೇ ಇಂತಹವುಗಳನ್ನು ನಿಲ್ಲಿಸಬೇಕು. ಗೆರೆ ದಾಟುವ ಕೆಲಸವನ್ನು ಆ ಪಕ್ಷ ಮಾಡಬಾರದು ಎಂದರು.
ಈ ಹಿಂದೆ ಸದನದಲ್ಲಿ ಬಡತನದ ಕುರಿತು ಪ್ರಶ್ನಿಸುವ ವೇಳೆ ತಮ್ಮ ದುಬಾರಿ ಬೆಲೆಯ ಲೂಯಿ ವಿಟಾನ್ ಬ್ಯಾಗ್ನ್ನು ಬಚ್ಚಿಟ್ಟುಕೊಳ್ಳುವ ಮೂಲಕ ಮಹುವಾ ಮೊಯಿತ್ರಾ ಅವರು ಟೀಕೆಗೊಳಗಾಗಿದ್ದರು.