ನವದೆಹಲಿ, ಸೆ 10 (DaijiworldNews/DB): ದೇಶದ ಬೆಳವಣಿಗೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಹಿರಿದು. ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ಮುನ್ನಡೆಸುವತ್ತ ದೇಶ ದಾಪುಗಾಲಿಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೇಂದ್ರ-ರಾಜ್ಯ ವಿಜ್ಞಾನ ಸಮಾವೇಶವನ್ನ ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ಮುನ್ನಡೆಸುವತ್ತ ದೇಶ ದಾಪುಗಾಲಿಡುತ್ತಿರುವ ಈ ವೇಳೆ ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಪಾತ್ರ ತುಂಬಾ ಪ್ರಮುಖವಾದುದು. ನವ ಭಾರತದ ಅಭಿವೃದ್ದಿಯಲ್ಲಿ ಎಲ್ಲಾ ಕ್ಷೇತ್ರಗಳ ಬೆಳವಣಿಗೆಯನ್ನು ಕ್ಷಿಪ್ರವಾಗಿಸಲು ವಿಜ್ಞಾನ ಕ್ಷೇತ್ರದ ಕೊಡುಗೆ ಅತೀ ಅಗತ್ಯವಾಗಿದೆ ಎಂದರು.
ನಮ್ಮ ದೇಶದ ವಿಜ್ಞಾನಿಗಳ ಸಾಧನೆ ದೊಡ್ಡದು. ಅಂತಹ ಸಾಧನೆಗಳನ್ನು ಎಲ್ಲರೂ ಒಟ್ಟಾಗಿ ಆಚರಿಸಬೇಕು. ಅದು ನಮ್ಮ ಸಂಸ್ಕೃತಿಯ ಭಾಗವೂ ಆಗಿದೆ. ವಿಜ್ಞಾನಾಧಾರಿತವಾಗಿಯೇ ಸರ್ಕಾರ ಹೊಸತನವನ್ನು ಕಂಡುಕೊಳ್ಳಲು ಬಯಸುತ್ತದೆ ಎಂದವರು ತಿಳಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ '2014 ರಿಂದೀಚೆಗೆ ಹೂಡಿಕೆಗಳ ಪ್ರಮಾಣ ಹೆಚ್ಚಾಗಿರುವುದು ನಮ್ಮ ಹೆಮ್ಮೆಗೆ ಸಂದ ಗೌರವ. ತಂತ್ರಜ್ಞಾನದೆಡೆಗೆ ಬೇಗನೆ ಆಕರ್ಷಿತರಾಗುವ ಯುವಕರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನ್' ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿರುವ ಭಾರತದ ಶಕ್ತಿ ಇಡೀ ಜಗತ್ತಿಗೇ ತಿಳಿದಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.