ದೊಡ್ಡಬಳ್ಳಾಪುರ, ಸೆ 10 (DaijiworldNews/DB): ಸಿದ್ದರಾಮಯ್ಯನವರು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆಸುವ ಕನಸು ಕಾಣುತ್ತಿದ್ದಾರೆ. ಅವರೂ, ಡಿಕೆಶಿ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿಯ ಜನಸ್ಪಂದನ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬಂದ ಮಳೆಯ ಪ್ರಮಾಣ ಊಹಿಸಿ. ಸಿದ್ದರಾಮಯ್ಯನವರು ಬೋಟ್ನಲ್ಲಿ ಓಡಾಡುವ ಸಂದರ್ಭ ಬಂದಿದೆ. ಇದಕ್ಕೆಲ್ಲ ತಕ್ಕ ಉತ್ತರವನ್ನು ವಿಧಾನಸಭೆಯಲ್ಲೇ ನೀಡುತ್ತೇನೆ ಎಂದರು.
ರೈತರ ಪರವಾಗಿ, ಬಡವರ ಪರವಾಗಿ ಬಿಜೆಪಿ ಸರ್ಕಾರ ಕೆಲಸ ಮಾಡಿದೆ. ಆದರೆ ರಾಹುಲ್ ಗಾಂಧಿಯವರೀಗ ಬಡತನದ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಅವರು ಆಡಳಿತದಲ್ಲಿದ್ದ ವೇಳೆ ಬಡತನ ಸುಧಾರಣೆ ಕಂಡಿದೆಯೇ ಎಂದು ಪ್ರಶ್ನಿಸಿದ ಅವರು, ಬಡವರ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸೀಟು ಗೆಲ್ಲಲ್ಲಿದೆ. ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ ಅವರು, ನಾವು ಉತ್ತಮ ಕಾರ್ಯಕ್ರಮಗಳನ್ನು ಜನರಿಗಾಗಿ ನೀಡಿದ್ದೇವೆ ಎಂದರು.