ಮಂಡ್ಯ, ಸೆ 10 (DaijiworldNews/DB): ಮುಂದಿನ ಲೋಕಸಭಾ ಚುನಾವಣೆಯ ಬಳಿಕ ದೇಶದಲ್ಲಿ ಕಾಂಗ್ರೆಸ್ ಪಕ್ಷ ಇತಿಹಾಸದ ಪುಟ ಸೇರಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮಂಡ್ಯದ ಬೂಕನಕೆರೆಯಲ್ಲಿ ಸಮೀಪದ ಭೂ ವರಾಹನಾಥ ಕ್ಷೇತ್ರಕ್ಕೆ ಆಗಮಿಸಿ ಭೂ ವರಾಹನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಜನ ಬಿಜೆಪಿ ಪರವಾಗಿದ್ದಾರೆ. ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಮೂರನೇ ಬಾರಿಗೆ ಅವರೇ ಪ್ರಧಾನಿಯಾಗಲಿದ್ದಾರೆ. ಮೋದಿ ಅಲೆಯಿಂದ ವಿರೋಧ ಪಕ್ಷಗಳು ಕಂಗಾಲಾಗಿದ್ದು, ಕಾಂಗ್ರೆಸ್ ಇತಿಹಾಸದ ಪುಟ ಸೇರಲಿದೆ ಎಂದರು.
ಕೆಲವೇ ರಾಜ್ಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಡೆಯೂ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ. ನಮ್ಮ ಗುರಿ ಕಾಂಗ್ರೆಸ್ ಮುಕ್ತ ಭಾರತ. ಕಾಂಗ್ರೆಸ್ ಸಂಸ್ಕೃತಿಯ ನಾಶವೇ ಇದರ ಉದ್ದೇಶ ಹೊರತು ಆ ಪಕ್ಷವನ್ನು ನಾಶಪಡಿಸುವುದಲ್ಲ ಎಂದವರು ತಿಳಿಸಿದರು.