ಬೆಂಗಳೂರು, ಸೆ 10 (DaijiworldNews/DB): ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಆಗಿಲ್ಲ. ಆದರೆ ಯೋಜನೆ ರೂಪಿಸುವುದರಲ್ಲಿ ಲೋಪ ಉಂಟಾಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ಹೆದ್ದಾರಿಯ ಒಳಚರಂಡಿ ವ್ಯವಸ್ಥೆಯಲ್ಲಿ ಸಮಸ್ಯೆ ಆಗಿದೆ. ಹೆದ್ದಾರಿ ಯೋಜನೆಯಲ್ಲಿ ಆಗಿರುವ ಲೋಪವನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೇಂದ್ರ ಸಚಿವನಾದ ಎಂಟು ವರ್ಷ ಅವಧಿಯಲ್ಲಿ ಸುಮಾರು 50 ಲಕ್ಷ ಕೋಟಿ ರೂ. ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ಆದರೆ ಯಾವುದೇ ಯೋಜನೆಯಲ್ಲಿಯೂ ಭ್ರಷ್ಟಾಚಾರ ಆರೋಪ ಬಂದಿಲ್ಲ. ಹಣ ಮಾಡಲು ಬೇರೆ ಉದ್ಯೋಗಗಳಿವೆಯೇ ಹೊರತು ಸಚಿವನಾಗಬೇಕಿಲ್ಲ. ಸಂಪುಟದಲ್ಲಿ ಭ್ರಷ್ಟಾಚಾರದ ವ್ಯವಸ್ಥೆಯೇ ಇಲ್ಲ ಎಂದವರು ತಿಳಿಸಿದರು.
ಕರ್ನಾಟಕದಲ್ಲಿ ಭ್ರಷ್ಟಾಚಾರ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಇದೇ ವೇಳೆ ಗಡ್ಕರಿಯವರೊಂದಿಗೆ ಚರ್ಚಿಸಿದ ಬಳಿಕ ಸಿಎಂ ಬೊಮ್ಮಾಯಿಯವರು ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಚರಂಡಿ ವ್ಯವಸ್ಥೆ ಸೇರಿದಂತೆ ಎಲ್ಲಾ ಕಾಮಗಾರಿಗಳನ್ನು ಸಂಪೂರ್ಣವಾಗಿ ಆಡಿಟ್ ಮಾಡಲಾಗುವುದು. ಅಡಚಣೆಗಳೇನಾದರೂ ಇದ್ದಲ್ಲಿ ಇದರಿಂದ ತಿಳಿದು ಬರುತ್ತದೆ ಎಂದರು.