ಶ್ರೀನಗರ, ಸೆ 10 (DaijiworldNews/DB): ಲಷ್ಕರ್-ಇ-ತೊಯ್ಬಾದ ಇಬ್ಬರು ಶಂಕಿತ ಉಗ್ರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಡಿಪೋರಾ ನಿವಾಸಿ ಶಾಕಿರ್ ಅಕ್ಬರ್ ಗೋಜ್ರೆ ಮತ್ತು ಬಾರಾಮುಲ್ಲಾ ನಿವಾಸಿ ಮೊಹ್ಸಿನ್ ವಾನಿ ಬಂಧಿತರು. ಬಂಧಿತರ ಬಳಿಯಿದ್ದ ಎರಡು ಗ್ರೆನೇಡ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರೂ ನಿಷೇಧಿತ ಲಷ್ಕರ್-ಇ-ತೊಯ್ಬಾದ ಸ್ಥಳೀಯ ಕಾರ್ಮಿಕರು ಎನ್ನಲಾಗಿದೆ. ಅಲ್ಲದೆ ಭದ್ರತಾ ಪಡೆಗಳ ಮೇಲೆ ದಾಳಿಗೆ ಹೊಂಚು ಹಾಕುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂಬುದಾಗಿ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಸೋಪೋರ್ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಸೋಪೋರ್ ಪೊಲೀಸ್ ಠಾಣೆಯ ವ್ಯಾಪ್ತಿಯ ಗೌಸಿಯಾಬಾದ್ ಚೌಕ್ ಚಿಂಕಿಪೋರಾದಲ್ಲಿ ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳ ಸಮನ್ವಯದಲ್ಲಿ ಸ್ಥಾಪಿಸಲಾಗಿರುವ ಚೆಕ್ಪಾಯಿಂಟ್ನಲ್ಲಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಇಬ್ಬರು ಅನುಮಾನಾಸ್ಪದವಾಗಿ ಚಲಿಸುತ್ತಿದ್ದರು. ಈ ವೇಳೆ ಇಬ್ಬರನ್ನೂ ತಡೆದು ವಿಚಾರಣೆ ಮಾಡಿದಾಗ ಅವರಿಬ್ಬರೂ ಸ್ಥಳದಿಂದ ಕಾಲ್ಕೀಳಲು ಯತ್ನಿಸಿದರು. ಈ ವೇಳೆ ಕೂಡಲೇ ಕಾರ್ಯತತ್ಪರರಾದ ಭದ್ರತಾ ಪಡೆಗಳು ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಪೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.