ನವದೆಹಲಿ, ಸೆ 10 (DaijiworldNews/DB): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಅಣಕವಾಡಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವೀಡಿಯೋ ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಬಿಸ್ವಾ ಅವರು ರಾಹುಲ್ ಗಾಂಧಿಯವರನ್ನು ಹೊಗಳಿರುವ ವೀಡಿಯೋವನ್ನು ಕಾಂಗ್ರೆಸ್ ಪೋಸ್ಟ್ ಮಾಡಿದೆ. ಆ ಮೂಲಕ ಹಿಮಂತ ಬಿಸ್ವಾ ಅವರಿಗೆ ತಿರುಗೇಟು ನೀಡಿದೆ.
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯನ್ನು ಟೀಕಿಸಿ ಹಿಮಂತ ಬಿಸ್ವಾ ಅವರು ಪೋಸ್ಟ್ ಹಾಕಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸೂಕ್ತ ಸಂದರ್ಭದಲ್ಲಿ ರಾಹುಲ್ ಗಾಂಧಿ ದೇಶದ ಪ್ರಧಾನಿ ಗದ್ದುಗೆಯೇರುತ್ತಾರೆಂದು ಮಾಡಿದ್ದ ಪೋಸ್ಟ್ನ್ನು ಕಾಂಗ್ರೆಸ್ ನಾಯಕ ಮಾಣಿಕ್ಕಂ ಟ್ಯಾಗೋರ್ ಅವರು ಟ್ವೀಟ್ ಮಾಡಿದ್ದಾರೆ.
ಶರ್ಮಾ ಅವರು ರಾಹುಲ್ ಗಾಂಧಿಯವರನ್ನು ಅಣಕಿಸಿ ಪೋಸ್ಟ್ ಮಾಡಿದ ವೀಡಿಯೋ ಮತ್ತು 2010ರಲ್ಲಿ ರಾಹುಲ್ ಗಾಂಧಿಯವರನ್ನು ಹೊಗಳಿ ಮಾಡಿದ ಪೋಸ್ಟ್ನ್ನು ಟ್ವೀಟರ್ನಲ್ಲಿ ಪ್ರಕಟಿಸಿರುವ ಮಾಣಿಕ್ಯಂ ಅವರು, ನರೇಂದ್ರ ಮೋದಿಯವರೇ, ಹಿಮಂತ ಬಿಸ್ವಾ ಅವರು ಯಾರಿಗೆ ವಂಚಿಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಅವರ ಬಗ್ಗೆ ಎಚ್ಚರದಿಂದಿರಬೇಕೆಂಬುದನ್ನು ಅವರ ಟ್ರಾಕ್ ರೆಕಾರ್ಡ್ಗಳೇ ಹೇಳುತ್ತಿವೆ ಎಂದು ಟ್ವೀಟ್ ಮಾಡಿದ್ದಾರೆ.
ಹಿಮಂತ ಶರ್ಮಾ ಅವರು 2015ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ನ ಮಹಾತ್ವಾಕಾಂಕ್ಷೆಯ 'ಭಾರತ್ ಜೋಡೋ ಯಾತ್ರೆ'ಯನ್ನು "ಶತಮಾನದ ಹಾಸ್ಯ" ಎಂದು ಬುಧವಾರ ಜರೆದಿದ್ದರು. ಅಲ್ಲದೆ ರಾಹುಲ್ ಗಾಂಧಿಯವರನ್ನು ಅಣಕವಾಡುವ ವೀಡಿಯೋವನ್ನು ಪೋಸ್ಟ್ ಮಾಡಿದ್ದರು.