ಬೆಂಗಳೂರು, ಸೆ 10 (DaijiworldNews/MS): ಕಾಂಗ್ರೆಸ್ ಗುರುವಾರದಿಂದ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದೀಗ ಬಿಜೆಪಿ ರಾಹುಲ್ ಗಾಂಧಿ ಧರಿಸಿದ್ದ ಟೀ ಶರ್ಟ್ ಬಗ್ಗೆ ಟೀಕೆ ಮಾಡುತ್ತಿದೆ . ಇದೇ ವಿಚಾರವಗಿ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ "ಬಿಜೆಪಿಯವರು ಮೊದಲು ಸ್ವಯಂಘೋಷಿತ ಫಕೀರ ಮೋದಿಯವರಿಗೆ ದುಬಾರಿ ಜೀವನ ತ್ಯಜಿಸಲು ಹೇಳಲಿ" ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, " ರಾಹುಲ್ ಗಾಂಧಿಯವರ ದುಬಾರಿ ಟಿ- ಶರ್ಟ್ ಬಗ್ಗೆ ವ್ಯಂಗ್ಯವಾಡುವ ಬಿಜೆಪಿ ಮೋದಿಯವರ ದುಬಾರಿ ಸೂಟಿನ ಬಗ್ಗೆಯೂ ವ್ಯಂಗ್ಯವಾಡಲಿ. ಸ್ವಯಂಘೋಷಿತ ಫಕೀರ ಮೋದಿಯವರು ಲಕ್ಷಾಂತರ ಬೆಲೆ ಬಾಳುವ ಸೂಟು ಬೂಟು ಧರಿಸುತ್ತಾರೆ. ಅದು ಬಿಜೆಪಿಯವರ ಕಣ್ಣಿಗೆ ಕಾಣುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
"ಬಿಜೆಪಿಯವರಿಗೆ ರಾಹುಲ್ ಗಾಂಧಿಯವರ ಉಡುಗೆ ತೊಡುಗೆ ಬಗ್ಗೆ ಮಾತಾಡಲು ಯಾವ ನೈತಿಕತೆಯಿದೆ? ಫಕೀರ ಎಂದರೆ ಸಂತನ ಪ್ರತಿರೂಪ. ಫಕೀರ ಎಂದು ಕರೆಸಿಕೊಳ್ಳುವವರು ಆಡಂಬರ-ಐಷಾರಾಮಿ ಬದುಕು ಸಾಗಿಸಬಾರದು.ಬಿಜೆಪಿಯವರು ಮೊದಲು ಸ್ವಯಂಘೋಷಿತ ಫಕೀರ ಮೋದಿಯವರಿಗೆ ದುಬಾರಿ ಜೀವನ ತ್ಯಜಿಸಲು ಹೇಳಲಿ. ನಂತರ ರಾಹುಲ್ ಗಾಂಧಿಯವರ ಬಗ್ಗೆ ಮಾತಾಡಲಿ.ಬಿಜೆಪಿಯವರ ತಟ್ಟೆಯಲ್ಲೇ ಹೆಗ್ಗಣ ಬಿದ್ದು ಕೊಳೆಯುತ್ತಿದೆ. ಹೀಗಿರುವಾಗ ಇನ್ನೊಬ್ಬರ ತಟ್ಟೆಯ ಚಿಂತೆ ಯಾಕೆ?" ಎಂದು ಪ್ರಶ್ನಿಸಿದ್ದಾರೆ.